ಮಂಡ್ಯ: ಐತಿಹಾಸಿಕ ದಸರಾ ದಿನವಾದ ನಿನ್ನೆ ರಾಜ್ಯ ಸರ್ಕಾರಕ್ಕೆ ರೈತರು ಶಾಕ್ ಕೊಟ್ಟಿದ್ದಾರೆ. ಮೈಸೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಸರ್ಕಾರಕ್ಕೆ ರೈತ ಸಂಘ ಬಿಸಿ ಮುಟ್ಟಿಸಿದೆ.
ಜಿಲ್ಲೆಯಾದ್ಯಂತ 8 ಕಡೆ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿದರು. ಮಂಡ್ಯದ ವಿಸಿ ಫಾರಂ ಗೇಟ್ನಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಮೈಸೂರಿಗೆ ತೆರಳುವ ವಾಹನಗಳನ್ನ ತಡೆದು ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಈ ವೇಳೆ ಎತ್ತಿನಗಾಡಿ, ಟ್ರ್ಯಾಕ್ಟರ್, ಕುರಿ, ಕೋಳಿ, ಜಾನುವಾರು, ನಾಯಿಗಳನ್ನ ರಸ್ತೆ ಮಧ್ಯೆ ಇರಿಸಿ ಆಕ್ರೋಶ ಹೊರಹಾಕಿದರು. ಬಳಿಕ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಇದನ್ನೂ ಓದಿ: ಬಾಗಲಕೋಟೆ: ಭೂಸ್ವಾಧೀನ ವಿರೋಧಿಸಿ ರೈತರ ಬೃಹತ್ ಪ್ರತಿಭಟನೆ
ಇನ್ನು, ಮಂಡ್ಯದ ಶ್ರೀರಂಗಪಟ್ಟಣದ ಕಿರಂಗೂರು ಸರ್ಕಲ್ ಬಳಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಬೆಂಗಳೂರು - ಮೈಸೂರು -ಜೀವರ್ಗಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಜೊತೆಗೆ ಮಳವಳ್ಳಿಯ ಕನಕಪುರ ರಸ್ತೆ ಹಾಗೂ ಮದ್ದೂರಿನಲ್ಲಿ ಬೆಂಗಳೂರು-ಮೈಸೂರು, ತುಮಕೂರು ಹೆದ್ದಾರಿ ತಡೆದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಹಲವು ಬಾರಿ ಸರ್ಕಾರಕ್ಕೆ ರೈತರ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಗಿದೆ. ಆದ್ರೆ, ಸರ್ಕಾರ ರೈತರನ್ನ ನಿರ್ಲಕ್ಷ್ಯ ಮಾಡ್ತಿದೆ. ಟನ್ ಕಬ್ಬಿಗೆ 4,500 ರೂ. ನಿಗದಿ ಮಾಡಬೇಕು, ಎಸ್ಎಪಿ ಘೋಷಣೆ ಮಾಡಬೇಕು ಎಂದು ಅನ್ನದಾತರು ಆಗ್ರಹಿಸಿದರು.