ಮಂಡ್ಯ/ಮೈಸೂರು: ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಇಂದು ಬೆಳಗ್ಗೆ ಭಾರಿ ಶಬ್ದದ ಜೊತೆ ಭೂಮಿ ಕಂಪಿಸಿದ ಅನುಭವವಾಗಿದ್ದು ಜನರು ಆತಂಕಗೊಂಡಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ, ಮಾದಾಪುರ, ಗೊಂದಿಹಳ್ಳಿ, ಚಿನ್ನೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಕಂಪನವಾಗಿದೆ.
ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಒಂದೆರಡು ನಿಮಿಷಗಳ ಕಾಲ ಭಾರಿ ನಿಗೂಢ ಶಬ್ದವೊಂದು ಕೇಳಿಸಿದ್ದು, ಭೂಮಿ ಕಂಪಿಸಿದ ಅನುಭವವಾಗಿದೆ. ಪರಿಣಾಮ ಆತಂಕಗೊಂಡ ಜನ ಮನೆ ಬಿಟ್ಟು ಹೊರಗೆ ಓಡಿಬಂದಿದ್ದಾರೆ.
ಸಾಲಿಗ್ರಾಮದಲ್ಲಿ ಭೂ ಕಂಪನ: ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಬೆಳಗಿನ ಜಾವ 4.15ರಲ್ಲಿ ಭೂಮಿಯಲ್ಲಿ ಭಾರೀ ಶಬ್ದ ಹಾಗೂ ಭೂಮಿ ಕಂಪಿಸಿದ ಅನುಭವವಾಗಿದೆ. ನಿದ್ರೆಯಲ್ಲಿದ್ದ ಜನ ಗಾಬರಿಯಿಂದ ಮನೆಯಿಂದ ಹೊರಬಂದಿದ್ದಾರೆ. ಭೂಮಿ ಕಂಪಿಸಿರುವುದನ್ನು ಇನ್ನೂ ಅಧಿಕಾರಿಗಳು ದೃಢಪಡಿಸಿಲ್ಲ. ಭೂಕಂಪನವೇ ಅಥವಾ ಬೇರೆ ಶಬ್ದವೇ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.
ಕೊಡಗಿನಲ್ಲೂ ಕಂಪಿಸಿದ ಭೂಮಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ರೇಂಜರ್ ಬ್ಲಾಕ್, ನೇಗಳ್ಳೆ ಗ್ರಾಮಗಳಲ್ಲಿ ಸಹ ಭೂಕಂಪನವುಂಟಾಗಿದೆ. ಮಡಿಕೇರಿ ನಗರ, ದೇವಸ್ತೂರು ಸೇರಿ ವಿವಿಧೆಡೆ ನಸುಕಿನ ಜಾವ 4.37ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ಕೊಡಗು ಮತ್ತು ಹಾಸನ ಜಿಲ್ಲೆಯ ಗಡಿಭಾಗದಲ್ಲಿ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.4ರಷ್ಟು ದಾಖಲಾಗಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಆಯುಕ್ತರು ಭೂಕಂಪ ಸಂಭವಿಸಿರುವುದನ್ನು ಖಚಿತಪಡಿಸಿದ್ದಾರೆ. ನಸುಕಿನ ಜಾವ 4.38ರ ಸುಮಾರಿಗೆ ಅಕರಲಗೂಡು, ಹೊಳೆನರಸೀಪುರ ತಾಲೂಕುಗಳ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿತು. ತೀವ್ರತೆ ರಿಕ್ಟರ್ ಮಾಪಕದಲ್ಲಿ 3.4ರಷ್ಟಿತ್ತು ಎಂದು ಕೇಂದ್ರವು ತಿಳಿಸಿದೆ.
ಇದನ್ನೂ ಓದಿ: ಹಾಸನದಲ್ಲಿ ಭೂಕಂಪನ: ಜೀವಭಯದಲ್ಲಿ ಗ್ರಾಮಸ್ಥರು