ಮಂಡ್ಯ : ಕೋವಿಡ್ ಸಂದರ್ಭ ವಾರಸುದಾರರಿಲ್ಲದೆ ಮೃತಪಟ್ಟವರ ಚಿತಾಭಸ್ಮ ವಿಸರ್ಜಿಸಿದ್ದ ಕಂದಾಯ ಸಚಿವ ಆರ್. ಅಶೋಕ್, ಅ.4ರಂದು ಆತ್ಮಗಳ ಸದ್ಗತಿಗಾಗಿ ಪಿಂಡ ಪ್ರದಾನ ನಡೆಸಲು ಮುಂದಾಗಿದ್ದಾರೆ.
ಶ್ರೀರಂಗಪಟ್ಟಣ ಸಮೀಪದ ಗಂಜಾಂನ ಗೋಸಾಯ್ ಘಾಟ್ ಕಾವೇರಿ ನದಿ ತೀರದಲ್ಲಿ ಈ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ವೈದಿಕ ಹಾಗೂ ಜ್ಯೋತಿಷಿ ವೇ. ಡಾ.ವಿ.ಭಾನುಪ್ರಕಾಶ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ಕೆ ಸಿದ್ಧತೆ ಕೈಗೊಂಡಿದ್ದಾರೆ.
ಅಸ್ತಿ ವಿಸರ್ಜಿಸಿದ ಆತ್ಮಗಳಿಗೆ ಸದ್ಗತಿ ತೋರುವ ಸಲುವಾಗಿ ಅ.4ರಂದು ವೇದಬ್ರಹ್ಮ ಡಾ.ಭಾನುಪ್ರಕಾಶ್‌ರೊಂದಿಗೆ ವೈದಿಕರ ತಂಡವು ಕಂದಾಯ ಸಚಿವ ಆರ್.ಅಶೋಕ್ ಅವರ ನೇತೃತ್ವದಲ್ಲಿ ರೇಷ್ಮೆ ಸಚಿವ ಕೆ ಸಿ ನಾರಾಯಣಗೌಡ ಸಮ್ಮುಖದಲ್ಲಿ ಅತೃಪ್ತ ಆತ್ಮಗಳಿಗೆ ಸಾಮೂಹಿಕವಾಗಿ ಪ್ರೇತ ಸಂಸ್ಕಾರ, ನಾರಾಯಣ ಬಲಿ ಹಾಗೂ ಪಿಂಡ ಪ್ರದಾನವನ್ನು ಕಾವೇರಿಯಲ್ಲಿ ಸಲ್ಲಿಸಲು ನಿರ್ಧರಿಸಲಾಗಿದೆ.
ಇದಕ್ಕಾಗಿ ಜಿಲ್ಲಾಧಿಕಾರಿ ಎಸ್.ಅಶ್ವತಿ, ಪಾಂಡವಪುರ ಉಪವಿಭಾಗಧಿಕಾರಿ ಬಿ ಸಿ ಶಿವಾನಂದಮೂರ್ತಿ, ತಾಲೂಕು ತಹಶೀಲ್ದಾರ್ ಶ್ವೇತಾ ಎನ್ ರವೀಂದ್ರ ಹಾಗೂ ಪುರಸಭಾ ಮುಖ್ಯಾಧಿಕಾರಿ ಡಾ. ಮಾನಸ ಧರ್ಮರಾಜು ಹಾಗೂ ಪೊಲೀಸರೊ೦ದಿಗೆ ಚರ್ಚಿಸಿ ಶುಕ್ರವಾರ ಗೋಸಾಯ್ ಘಾಟ್‌ನಲ್ಲಿ ಸ್ಥಳ ಪರಿಶೀಲಿಸಿ ಅಗತ್ಯ ಸಿದ್ಧತೆ ಕೈಗೊಂಡಿದ್ದಾರೆ.