ಮಂಡ್ಯ: ಪಡಿತರ ಚೀಟಿದಾರರು ಮೃತಪಟ್ಟ ನಂತರವೂ ಅವರ ಹೆಸರಿನಲ್ಲಿ ಅಕ್ಕಿ ಪಡೆದು ವಂಚಿಸಿದ ಆರೋಪದ ಮೇಲೆ ಜಿಲ್ಲಾಧಿಕಾರಿ ಎಸ್. ಅಶ್ವಥಿಯವರು ತಾಲೂಕಿನ ಹುನಗನಗಳ್ಳಿ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ರದ್ದುಗೊಳಿಸಿದ್ದಾರೆ.
ಮಂಡ್ಯ ತಾಲೂಕಿನ ಹುನಗನಹಳ್ಳಿ ಗ್ರಾಮದಲ್ಲಿ ಪಡಿತರ ವಿತರಕ ಶಿವರಾಜು ಎಂಬಾತ 2-3 ವರ್ಷಗಳಿಂದ ಸರ್ಕಾರದ ಕಣ್ತಪ್ಪಿಸಿ ನೂರಾರು ಕ್ವಿಂಟಾಲ್ ಅಕ್ಕಿ ದೋಖಾ ಮಾಡಿದ್ದು, ಸರ್ಕಾರದ ಲೆಕ್ಕದಲ್ಲಿ ಸತ್ತವರಿಗೂ ಪಡಿತರ ನೀಡುತ್ತಿದ್ದಾನೆ ಎಂದು ಕೆಲವರು ಆರೋಪಿಸಿದ್ದರು. ಈ ಕುರಿತಂತೆ ಈಟಿವಿ ಭಾರತ ವದರಿ ಮಾಡಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಹುನಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಈ ವೇಳೆ ಮೃತಪಟ್ಟ 17 ಪಡಿತರ ಚೀಟಿದಾರರ ಹೆಸರುಗಳನ್ನು ಚೀಟಿಯಿಂದ ತೆಗೆದಿಲ್ಲ. ಅವರ ಪಾಲಿಗೆ ಬಂದಿದ್ದ ಅಕ್ಕಿಯನ್ನು ನಮಗೂ ನೀಡಿಲ್ಲ ಎಂದು ಕುಟುಂಬದ ಸದಸ್ಯರು ಹೇಳಿಕೆ ನೀಡಿದ್ದರು. ಇದರಿಂದ ಅಕ್ಕಿಯನ್ನು ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಓದಿ: ಮೃತರ ಹೆಸರಲ್ಲಿ ರೇಷನ್ ಪಡೆದು ಸರ್ಕಾರಕ್ಕೆ ಮೋಸ ಆರೋಪ
ಸುಮಾರು 17 ಪಡಿತರ ಚೀಟಿದಾರರ ಬಗ್ಗೆ ಹಾಗೂ ಇಂತಹ ಪ್ರಕರಣಗಳು ಬೇರೆ ಪಡಿತರ ಚೀಟಿಗಳಲ್ಲೂ ನಡೆದಿವೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಎಷ್ಟು ಪ್ರಮಾಣದ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿ ಮಾಲೀಕರು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಬಗ್ಗೆ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದ್ದಾಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಶರತ್ ಆದೇಶದಲ್ಲಿ ತಿಳಿಸಿದ್ದಾರೆ.