ಮಂಡ್ಯ: ಕಳೆದ 9 ತಿಂಗಳಿನಿಂದ ಕೊರೊನಾ ಸೋಂಕಿನಿಂದ ಸಂಕಷ್ಟ ಅನುಭವಿಸಿದ್ದ ಜಿಲ್ಲೆಯ ಜನರು ಯಾವಾಗ ಕೊರೊನಾಗೆ ಲಸಿಕೆ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಕೊನೆಗೂ ವರ್ಷದ ಮೊದಲ ಹಬ್ಬ ಸಂಕ್ರಾಂತಿ ದಿನವೇ ಲಸಿಕೆ ಜಿಲ್ಲೆಯನ್ನು ತಲುಪಿದೆ.
ಇಂದು ಸಂಜೆ ಮೈಸೂರಿನಿಂದ ಆಗಮಿಸಿದ ಲಸಿಕೆ ಹೊತ್ತ ವಾಹನ ನಗರದ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣಾಧಿಕಾರಿ ಕಚೇರಿಯ ಲಸಿಕೆ ಸಂಗ್ರಹ ಕೊಠಡಿಗೆ ಬಂತು. ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ನೇತೃತ್ವದ ಅಧಿಕಾರಿಗಳ ತಂಡ ಲಸಿಕೆ ಇದ್ದ ಕೋಲ್ಡ್ ಬಾಕ್ಸ್ಗಳಿಗೆ ಪೂಜೆ ಸಲ್ಲಿಸಿ ನಂತರ ಕೊಠಡಿಗೆ ರವಾನಿಸಿದರು.
8 ಸಾವಿರ ಕೊವಿಶೀಲ್ಡ್ ಲಸಿಕೆ ನಾಲ್ಕು ಕೋಲ್ಡ್ ಬಾಕ್‍ನಲ್ಲಿ ಬಂದಿದ್ದು, ಡಿಫ್ರೀಜರ್ ಮಾಡಿ ಲಸಿಕೆಗಳನ್ನು ಸಂಗ್ರಹಿಸಿಲಾಯಿತು. ಶನಿವಾರದಿಂದ ತಾಲೂಕುಗಳಿಗೆ ಹಂಚಿಕೆ ಮಾಡಿ ರವಾನಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಲಸಿಕೆ ನೀಡಲು ಅಗತ್ಯ ಸಿಬ್ಬಂದಿ ನೇತೃತ್ವದ ತಂಡಕ್ಕೆ ತರಬೇತಿ ನೀಡಲಾಗುತ್ತಿದ್ದು, ಲಸಿಕೆ ನೀಡುವ ಕಾರ್ಯ ನಿರ್ವಹಿಸಲಿದ್ದಾರೆ.
ಮೊದಲ ಹಂತದಲ್ಲಿ 15,316 ಮಂದಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ತಾಲೂಕುವಾರು ನೋಂದಣಿ ಮಾಡಿಸಿಕೊಂಡಿರುವ ಕೊರೊನಾ ವಾರಿಯರ್ಸ್‍ಗಳಿಗೆ ಲಸಿಕೆ ನೀಡಲು ಸಿದ್ಧತೆ ನಡೆದಿದೆ. ಶನಿವಾರದಿಂದ ಲಸಿಕೆ ಹಾಕುವ ಕಾರ್ಯ ನಡೆಯಲಿದ್ದು, ಮೊದಲ ಹಂತದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಸಫಾಯಿ ಕರ್ಮಚಾರಿ, ಡಿ ಗ್ರೂಪ್ ನೌಕರರು ಹಾಗೂ ಕೊರೊನಾ ಸೋಂಕಿತರೊಂದಿಗೆ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.
ನಂತರ 2ನೇ ಹಂತದಲ್ಲಿ ವೈದ್ಯರು, ಪೊಲೀಸರು, ಕಂದಾಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸೋಂಕಿತರು, ವಯಸ್ಸಾದವರಿಗೆ ನೀಡಲು ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಒಬ್ಬ ವ್ಯಕ್ತಿಗೆ ಮೊದಲ ಲಸಿಕೆ ನೀಡಿದ 28 ದಿನಗಳ ನಂತರ ಎರಡನೆ ಡೋಸ್ ನೀಡಲಾಗುವುದು. ಮೊದಲ ಹಂತದ ಲಸಿಕೆ ನೀಡಲು ಜಿಲ್ಲೆಯಾದ್ಯಂತ 8 ಕೇಂದ್ರಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶನಿವಾರದಿಂದ 6 ತಾಲೂಕು ಆಸ್ಪತ್ರೆಯ ಕೇಂದ್ರ, ಮಂಡ್ಯದ ಮಿಮ್ಸ್ ಹಾಗೂ ಕೊತ್ತತ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲಾಗುವುದು. ನಂತರ ಕೇಂದ್ರಗಳನ್ನು ವಿಸ್ತರಿಸಲು ಕ್ರಮ ವಹಿಸಲಾಗಿದೆ.
ಪ್ರತಿದಿನ 8 ಕೇಂದ್ರಗಳಲ್ಲಿ ತಲಾ 100 ಮಂದಿಯಂತೆ 800 ಮಂದಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಬ್ಬ ವ್ಯಕ್ತಿಗೆ ಲಸಿಕೆ ನೀಡಿದ 30 ನಿಮಿಷಗಳ ಕಾಲ ನಿಗಾ ವಹಿಸಲಾಗುವುದು. ನಂತರ ಆತನ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಂದರೆ ತಕ್ಷಣ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲು ಎಲ್ಲಾ ರೀತಿಯಲ್ಲೂ ವೈದ್ಯರು, ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದಾರೆ. ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಕಂಡು ಬರದಿದ್ದರೆ ಆ ವ್ಯಕ್ತಿಯನ್ನು ಮನೆಗೆ ಕಳುಹಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ತಿಳಿಸಿದರು.