ಮಂಡ್ಯ: ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರುವುದು ಸಾಮಾನ್ಯ ಎನ್ನುವಂತಾಗಿದೆ. ಈ ಹಿನ್ನೆಲೆ ಒಳಚರಂಡಿ ಹಾಗೂ ನೀರು ಸರಬರಾಜು ಇಲಾಖೆ ಮುನ್ನೆಚ್ಚರಿಕೆ ವಹಿಸಿ ನೀರಿನ ಮೂಲ ಉಳಿಸಲು ಪ್ರಯತ್ನ ಮಾಡಬೇಕಿದೆ.
ಆದರೆ ಇಲಾಖೆಯ ನಿರ್ಲಕ್ಷ್ಯದಿಂದ ಲಕ್ಷಾಂತರ ಲೀಟರ್ ಕಾವೇರಿ ನೀರು ಚರಂಡಿಗೆ ಸೇರಿ ವ್ಯರ್ಥವಾಗಿರುವ ಘಟನೆ ಮಂಡ್ಯದ ಬೆಂಗಳೂರು-ಮೈಸೂರು ಹೆದ್ದಾರಿ ಬಳಿ ನಡೆದಿದೆ. ಇಲ್ಲಿನ ಕಾವೇರಿ ನೀರು ಸರಬರಾಜಿನ ಮುಖ್ಯ ಕೊಳವೆ ಒಡೆದು ಹೋಗಿದ್ದು, ಬಾನೆತ್ತರಕ್ಕೆ ನೀರು ಚಿಮ್ಮಿದೆ. ಆದರೆ ಗಂಟೆಗಳ ಕಾಲ ನೀರು ವ್ಯರ್ಥವಾಗುತ್ತಿದ್ದರೂ ಯಾವೊಬ್ಬ ಅಧಿಕಾರಿ ಸಹ ಅತ್ತ ಕಡೆ ಸುಳಿಯಲೇ ಇಲ್ಲ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 50 ಅಡಿ ಎತ್ತರದವರೆಗೂ ನೀರು ಚಿಮ್ಮುತ್ತಿದ್ದು, ಪೊಲೀಸರು ಸಾರ್ವಜನಿರನ್ನು ನಿಯಂತ್ರಿಸುವ ಕೆಲಸ ಮಾಡಿದರು. ಘಟನೆಯಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಲೀಟರ್ ನೀರು ವ್ಯರ್ಥವಾಗಿರುವ ಬಗ್ಗೆ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸೋದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ನಾಗರಿಕರು ಎತ್ತಿದ್ದಾರೆ.
ಕೂಡಲೇ ಎಲ್ಲೆಲ್ಲಿ ಕಾವೇರಿ ನೀರು ಸರಬರಾಜಿನ ಮುಖ್ಯ ಕೊಳವೆ ಕಿತ್ತು ಹೋಗುವ ಪರಿಸ್ಥಿತಿ ಕಂಡುಬರುತ್ತಿದೆಯೋ ಅಲ್ಲೆಲ್ಲಾ ಸರಿಪಡಿಸಬೇಕು ಎಂಬ ಒತ್ತಾಯವನ್ನು ಸಾರ್ವಜನಿಕರು ಮಾಡುತ್ತಿದ್ದು, ಈ ರೀತಿ ಕೊಳವೆ ಕಿತ್ತು ಹೋಗುತ್ತಿದ್ದಂತೆ ಸರಿಯಾದ ಸಮಯಕ್ಕೆ ಬಂದು ರಿಪೇರಿ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.