ಬೆಂಗಳೂರು/ಮಂಡ್ಯ: ಸಿಎಂ ಯಡಿಯೂರಪ್ಪ ಮನೆ ದೇವರ ದರ್ಶನದ ನಂತರ ಮೇಲುಕೋಟೆ ಚಲುವನಾರಾಯಣ ಸ್ವಾಮಿಯ ದರ್ಶನ ಪಡೆದರು. ಬೂಕನಕೆರೆಯಲ್ಲಿ ಗೋಗಲಮ್ಮ, ಸ್ವತಂತ್ರ ಸಿದ್ದಲಿಂಗ ಸ್ವಾಮಿ ದರ್ಶನದ ನಂತರ ಪುತ್ರನ ಜೊತೆ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
ದೇವಾಲಯಕ್ಕೆ ಆಗಮಿಸಿದ ಯಡಿಯೂರಪ್ಪಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸಂಪ್ರದಾಯಿಕ ಸ್ವಾಗತ ಕೋರಿ ಚೆಲುವನಾರಾಯಣ ಸ್ವಾಮಿ ಗರ್ಭ ಗುಡಿಗೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಲಾಯಿತು. ಯಡಿಯೂರಪ್ಪ, ಪುತ್ರ ರಾಘವೇಂದ್ರ ಹಾಗೂ ಬಸವರಾಜ ಬೊಮ್ಮಾಯಿ ಹೆಸರಿನಲ್ಲಿ ಅರ್ಚನೆ ಮಾಡಿಸಲಾಯಿತು.
ಸ್ವಾಮಿ ದರ್ಶನದ ನಂತರ ಯದುಗಿರಿ ನಾಚರ್, ರಾಮಾನುಜಾಚಾರ್ಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು. ತಿರುನಾರಾಯಣನ ಮುಂದೆ ಪುರೋಹಿತರಿಂದ ಮಾಹಿತಿ ಪಡೆದ ಯಡಿಯೂರಪ್ಪ, ದಾಸೋಹ ಭವನ ನಿರ್ಮಾಣಕ್ಕಾಗಿ 2 ಕೋಟಿ ರೂಪಾಯಿ ಕೊಡುವುದಾಗಿ ಭರವಸೆ ನೀಡಿದರು.
ಸ್ವಾಮಿ ದರ್ಶನ ಬಳಿಕ ವಿಧಾನಸೌಧಕ್ಕೆ ಆಗಮಿಸಿದ ಸಿಎಂ:
ದೇವರ ದರ್ಶನ ಪಡೆದು ಸಂಜೆ 5 ಗಂಟೆಗೆ ವಿಧಾನಸೌಧಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಲೋಕೋಪಯೋಗಿ ಹಾಗೂ ನಗರಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಉಸ್ತುವಾರಿ ಮುಖ್ಯಮಂತ್ರಿ ಆದ ಕೂಡಲೇ ಹಿಂದೆ ಸರ್ಕಾರ ಕೈಗೊಂಡ ಎಲ್ಲಾ ವರ್ಗಾವಣೆಗೂ ತಡೆ ನೀಡಿದ ಮುಖ್ಯಮಂತ್ರಿಗಳು, ಇಂದು ನಡೆಸಿದ ಸಭೆಯಲ್ಲಿ ಯಾವೆಲ್ಲಾ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ ಎಂಬ ಕುತೂಹಲ ಮೂಡಿದೆ.
ಆದರೆ, ಸಭೆ ಮುಗಿದ ಬಳಿಕ ಮಾಧ್ಯಮಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಯಡಿಯೂರಪ್ಪ ತೆರಳಿದರು.