ಮಂಡ್ಯ: ಕನ್ನಡಪರ ಸಂಘಟನೆಗಳು ಹಾಗೂ ಸ್ಥಳೀಯರ ವಿರೋಧದ ನಡುವೆಯೂ ಬೆಂಗಳೂರು ಮೈಸೂರು ಹೆದ್ದಾರಿ ಎರಡನೇ ಹಂತದ ಶುಲ್ಕ ಸಂಗ್ರಹ ಗಣಂಗೂರು ಟೋಲ್‌ನಲ್ಲಿ ಇಂದು ಬೆಳಗ್ಗೆಯಿಂದ ಆರಂಭವಾಗಿದೆ. ಟೋಲ್ ಸಂಗ್ರಹ ಏಜೆನ್ಸಿಯಾದ ಮುಂಬೈನ ಇಂದರ್‌ದೀಪ್ ಕನ್‌ಸ್ಟ್ರಕ್ಷನ್ ಕಂಪನಿಯ ಸಿಬ್ಬಂದಿಗಳು ಟೋಲ್‌ನಲ್ಲಿ ವಾಹನ ಸವಾರರಿಂದ ಶುಲ್ಕ ಸಂಗ್ರಹ ಮಾಡಿದರು.
ಗಣಂಗೂರು ಟೋಲ್ನಲ್ಲಿಯು ಶುಲ್ಕ ಸಂಗ್ರಹ ಮುಂದಾಗಿರೋದಕ್ಕೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ದಶಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ. ಈಗಾಗಲೇ ಒಂದು ಟೋಲ್ಗೆ ಕಟ್ಟುತ್ತಿರುವ ಶುಲ್ಕ ಹೊರೆ ಬೀಳುತ್ತಿದೆ. ಸರ್ವಿಸ್ ರಸ್ತೆಯೆ ಸರಿಯಾಗಿ ಇಲ್ಲ. ಈ ಹೊತ್ತಿನಲ್ಲಿ ಟೋಲ್ ಶುಲ್ಕ ವಸೂಲಿ ಸರಿಯಲ್ಲ ಎಂದು ಜನರು ಕಿಡಿಕಾರಿದ್ದಾರೆ. ಕನ್ನಡಪರ ಸಂಘಟನೆ ಕಾರ್ಯಕರ್ತರು ಟೋಲ್ ಬಳಿ ಜಮಾಯಿಸಿ ಸರ್ವೀಸ್ ರಸ್ತೆ ಪೂರ್ಣಗೊಳಿಸದೇ, ಮೂಲ ಸೌಲಭ್ಯ ಒದಗಿಸದೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಗಣಂಗೂರು ಟೋಲ್‌ನಲ್ಲಿ ಶುಲ್ಕ ಸಂಗ್ರಹಿಸಬಾರದು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಅವರು ಕೂಡಲೇ ಶುಲ್ಕ ಸಂಗ್ರಹ ಸ್ಥಗಿತ ಮಾಡಬೇಕು ಎಂದು ಆಗ್ರಹಿಸಿದರು. ನಿನ್ನೆಯಷ್ಟೇ ಶಾಸಕರಾದ ದಿನೇಶ್ ಗೂಳಿಗೌಡ, ರವಿಕುಮಾರ್ ಗಣಿಗ, ರಮೇಶ್ ಬಂಡಿಸಿದ್ದೇಗೌಡ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ, ಸರ್ವಿಸ್ ರಸ್ತೆಗಳು, ಇನ್ನಿತರ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಟೋಲ್ ಸಂಗ್ರಹ ಮಾಡದಂತೆ ತಡೆ ನೀಡಲು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದು ಕೊರಿದ್ದರು. ಇದರ ನಡುವೆಯೆ ಟೋಲ್ ಶುಲ್ಕ ಸಂಗ್ರಹ ಆರಂಭಗೊಂಡಿದೆ. ಟೋಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಶುಲ್ಕ ಸಂಗ್ರಹಕ್ಕೆ ಅಡೆತಡೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಇದೇ ವೇಳೆ ಇಂದ್ರದೀಪ್ ಟೋಲ್ ಸಂಸ್ಥೆಯ ಮಾಲೀಕ ಆರ್.ಎಸ್ ಸಿಂಗ್ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದ ಜೊತೆ ಆಗಿದ್ದ ಕರಾರಿನ ಪ್ರಕಾರ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಫಾಸ್ಟ್ಟ್ಯಾಗ್ ಇದ್ರು ಸ್ಕ್ಯಾನ್ ಆಗದ ವಿಚಾರ ಕೆಲ ತಾಂತ್ರಿಕ ಸಮಸ್ಯೆ ಕಾರಣ ಹೀಗಾಗಿರಬೇಕು. ಇದನ್ನು ತಕ್ಷಣವೇ ಸರಿ ಪಡಿಸಿಕೊಳ್ಳುತ್ತೇವೆ. ಟೋಲ್ ಸಂಗ್ರಹ ಆರಂಭವಾದರೂ ಮೂಲ ಸೌಕರ್ಯದ ಕೊರತೆ ಹಿನ್ನೆಲೆ ಈಗತಾನೆ ಅಧಿಕೃತವಾಗಿ ಸ್ಟೇಜ್ 2 ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಮೂಲಸೌಕರ್ಯ ನೀಡುತ್ತೇವೆ. ಸ್ಥಳೀಯರಿಗೆ 80 ರೂಪಾಯಿ ಹಣ ವಸೂಲಿ ವಿಚಾರ ಸ್ಥಳೀಯ ವೈಟ್ ಬೋರ್ಡ್ ವಾಹನಗಳಿಗೆ ಪಾಸ್ ನಿಡುತ್ತೇವೆ. ಆ ವಾಹನದ ಸಂಖ್ಯೆಯನ್ನು ಎಂಟ್ರಿ ಮಾಡಿಕೊಂಡು ಓಡಾಡಲು ಅವಕಾಶ ಕಲ್ಪಿಸುತ್ತೇವೆ ಎಂದರು.
ಬಳಿಕ ಟೋಲ್ ಈ ಬಗ್ಗೆ ಮಹಿಳೆಯೊಬ್ಬರು ಮಾತನಾಡಿ, ನಮ್ಮ ಬಳಿ ಫಾಸ್ಟ್ ಟ್ಯಾಗ್ ಇದೆ ಆದ್ರೆ ಹಣವಿಲ್ಲ ಹಣ ರಿಚಾರ್ಜ್ ಮಾಡುವುದಕ್ಕು ಬಿಡುತ್ತಿಲ್ಲ. ಫಾಸ್ಟ್ ಟ್ಯಾಗ್ನಲ್ಲಿ ಹಣವಿಲ್ಲವೆಂದು 310 ರೂಪಾಯಿ ವಸೂಲಿ ಮಾಡಿದ್ದಾರೆ. ನಾವು ಒಂದೇ ಕಡೆ 310 ರೂ. ಹಣ ಕಟ್ಟಿದ್ರೆ ಎಲ್ಲಿಗೆ ಹೋಗ್ಬೇಕು ಏನ್ ಮಾಡ್ಬೇಕು. ಇಷ್ಟೊಂದು ಹಣ ಕಟ್ಟಬೇಕು ಎಂದು ಹೇಳಿದ್ರೆ ನಾವು ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ವಿ. ಮೊದಲು ಇಲ್ಲಿಗೆ ಕನ್ನಡದವರನ್ನ ತಂದು ಕೂರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Bengaluru-Mysuru Expressway: ಜುಲೈ 1ರಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ 2ನೇ ಟೋಲ್ ಆರಂಭ