ಕೊಪ್ಪಳ: ಸ್ನೇಹಿತರ ಜೊತೆಗೆ ಸಂತೋಷಕೂಟಕ್ಕೆ ಹೋಗಿದ್ದ ಯುವಕ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು ಮರ್ಯಾದಾ ಹತ್ಯೆ ನಡೆದಿರಬಹುದೆಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಘಟನೆ ಕಾರಟಗಿ ತಾಲೂಕಿನ ಬರಗೂರು ಗ್ರಾಮದಲ್ಲಿ ನಡೆದಿದೆ.
ಮೃತ ಯುವಕ ಗ್ರಾಮದ ದಾನೇಶ (ದಾನಪ್ಪ) ಕರಿಹನುಮಂತಪ್ಪ ಹರಿಜನ್ (24) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಸ್ನೇಹಿತರ ಜೊತೆ ದಾನೇಶ್ ಪಾರ್ಟಿ ಮಾಡಲು ಹೋಗಿದ್ದಾನೆ. ಈ ವೇಳೆ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದಾನೇಶ ಗ್ರಾಮದ ಮತ್ತೊಂದು ಕೋಮಿನ ಯುವತಿಯೊಂದಿಗೆ ಪ್ರೇಮದಲ್ಲಿದ್ದನಂತೆ. ಕೆಲವು ದಿನಗಳ ಹಿಂದೆ ಆ ಯುವತಿಯ ಪಾಲಕರು ಹಾಗೂ ಕುಟುಂಬ ಸದಸ್ಯರು ಯುವಕನಿಗೆ ಎಚ್ಚರಿಕೆ ಕೊಟ್ಟು ಹಲ್ಲೆಗೆ ಯತ್ನಿಸಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಅನುಮಾನದ ಮೇಲೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸ್ಥಳಕ್ಕೆ ಎಸ್ಪಿ ಟಿ.ಶ್ರೀಧರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ಹೆಂಡತಿಗೆ ಚುಡಾಯಿಸುತ್ತಿದ್ದ ಯುವಕನಿಗೆ ಪೆಟ್ರೋಲ್ ಸುರಿದು ಸುಟ್ಟ ಪ್ರಕರಣ: ಮೂವರ ಬಂಧನ