ಕೊಪ್ಪಳ: ಲಾಕ್ ಡೌನ್ ವೇಳೆ ಸಂಕಷ್ಟದಲ್ಲಿರುವವರಿಗೆ ಜನರು ಸಹಕಾರ ನೀಡುತ್ತಿದ್ದರೆ, ಜಿಲ್ಲೆಯ ರೈತರೊಬ್ಬರು ತಾವು ಬೆಳೆದಿದ್ದ ಟೊಮೆಟೊವನ್ನು ಉಚಿತವಾಗಿ ಹಂಚಿ ಜನರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾನೆ.
ಯಲಬುರ್ಗಾ ತಾಲೂಕು ಕುಡಗುಂಟಿ ಗ್ರಾಮದ ರೈತ ಬಸವರಾಜ ಬೊಮ್ಮನಾಳ ತನ್ನ ಸಹೋದರರ ಜೊತೆಗೂಡಿ ಹೊಲದಲ್ಲಿ ಬೆಳೆದಿದ್ದ ಟೊಮೆಟೊವನ್ನು ಗ್ರಾಮಸ್ಥರಿಗೆ ಉಚಿತವಾಗಿ ಹಂಚಿದ್ದಾರೆ.
ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಟೊಮೆಟೊವನ್ನು ತಾವೇ ಟಂಟಂ ವಾಹನದಲ್ಲಿ ತುಂಬಿಕೊಂಡು ಬಂದು ಜನರಿಗೆ ಹಂಚುತ್ತಿದ್ದು, ಕಷ್ಟದಲ್ಲಿರುವ ಜನರಿಗೆ ತಮ್ಮದೂ ಒಂದು ಸೇವೆ ಇರಲಿ ಎಂದು ಹೀಗೆ ಮಾಡುತ್ತಿದ್ದೇವೆ ಎಂದು ಬಸವರಾಜ ಹೇಳಿದ್ದಾರೆ.