ಕೊಪ್ಪಳ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಾರಿಗೆ ಸೌಲಭ್ಯ ಅಷ್ಟೊಂದು ವ್ಯವಸ್ಥಿತವಾಗಿಲ್ಲ. ಇಂತಹ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿ 30 ಕಿ.ಮೀ. ಸೈಕಲ್ ತುಳಿದು ಕರ್ತವ್ಯಕ್ಕೆ ಹಾಜರಾಗುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಜಿಲ್ಲೆಯ ಯಲಬುರ್ಗಾ ಬಸ್ ಡಿಪೋದ ಚಾಲಕ, ನಿರ್ವಾಹಕನಾಗಿರುವ ನೀಲಪ್ಪ ಎಂಬುವವರು ಸೈಕಲ್ ಮೂಲಕ ಬಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಗದಗ ಜಿಲ್ಲೆ ರೋಣ ತಾಲೂಕಿನ ನಿಡಗುಂದಿ ಗ್ರಾಮದ ನೀಲಪ್ಪ ತಮ್ಮೂರಿನಿಂದ ಸುಮಾರು 30 ಕಿಲೋ ಮೀಟರ್ ದೂರವಿರುವ ಯಲಬುರ್ಗಾಗೆ ಸೈಕಲ್ ಮೂಲಕ ಬಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಈಗ ಸಾರಿಗೆ ವ್ಯವಸ್ಥೆ ಅಷ್ಟೊಂದು ಅನುಕೂಲವಾಗಿಲ್ಲ. ಈ ನೆಪವನ್ನಿಟ್ಟುಕೊಂಡು ಕರ್ತವ್ಯಕ್ಕೆ ಹಾಜರಾಗುವುದನ್ನು ನಿಲ್ಲಿಸಬಾರದು ಎಂದು ಸೈಕಲ್ ಮೂಲಕ ಕರ್ತವ್ಯಕ್ಕೆ ಬಂದೆ ಎಂದು ನೀಲಪ್ಪ ಹೇಳಿದ್ದಾರೆ.
ನೀಲಪ್ಪ ಅವರ ಕರ್ತವ್ಯ ಪ್ರಜ್ಞೆಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.