ಕೊಪ್ಪಳ : ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಧ್ಯರಾತ್ರಿ ಒಂಟಿ ಮಹಿಳೆಯೊಬ್ಬರು ಸಹಾಯ ಕೋರಿ ನಿಂತಿದ್ದು, ಸ್ಥಳೀಯರು ಮಹಿಳೆಯನ್ನು ರಕ್ಷಣೆ ಮಾಡಿ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಿದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ಮಾರುತಿ ವೃತ್ತದಲ್ಲಿ ನ. 8ರ ಬುಧವಾರ ತಡರಾತ್ರಿ ನಡೆದಿದೆ.
ಟ್ರಕ್ ಚಾಲಕನೊಬ್ಬ ಮಧ್ಯ ವಯಸ್ಕ ಮಹಿಳೆಯನ್ನ ಶೌಚಕ್ಕೆ ಇಳಿಸಿ, ಪುನಃ ಹತ್ತಿಸಿಕೊಳ್ಳದೇ ಆಕೆಯನ್ನು ಬಿಟ್ಟು ಹೋಗಿದ್ದಾನೆ. ಮಹಿಳೆಯನ್ನು ವಿಚಾರಿಸಿದಾಗ ಓಡಿಶಾ ಮೂಲದ ಮಹಿಳೆ ಸಂಗೀತಾ ಎಂಬುವುದನ್ನು ಹೇಳಿಕೊಂಡಿದ್ದು, ಆಕೆ, ಪತಿಯೊಂದಿಗೆ ಟ್ರಕ್ನಲ್ಲಿ ಪ್ರಯಾಣಿಸುತ್ತಿದ್ದಾಗ ಶೌಚಕ್ಕೆ ಇಳಿಸಿ, ಚಾಲಕ ಹಾಗೂ ಪತಿ ಬಿಟ್ಟು ಹೋಗಿದ್ದಾಗಿ ತಿಳಿಸಿದ್ದಾಳೆ. ರಸ್ತೆ ಮಧ್ಯೆ ಒಬ್ಬಂಟಿ ಮಹಿಳೆ ಚಡಪಡಿಸುತ್ತಾ ನಿಂತಿರುವುದನ್ನು ಗಮನಿಸಿದ ಸ್ಥಳೀಯರಾದ ಮರಸಣ್ಣ ತಾಳದ್, ಮಲ್ಲು ದೇಸಾಯಿ ಮತ್ತು ಸ್ನೇಹಿತರು ಮಹಿಳೆಯನ್ನ ರಕ್ಷಿಸಿದ್ದಾರೆ.
ಮಧ್ಯರಾತ್ರಿ ಒಬ್ಬಂಟಿ ಮಹಿಳೆ ಸಂಗೀತಾಳ ರಕ್ಷಣೆ ಮಾಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತಾತ್ಕಾಲಿಕ ಆಶ್ರಯ ನೀಡಲಾಗಿತ್ತು. ನಂತರ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಈ ಮಹಿಳೆಯ ಕುರಿತು ಇನ್ನಷ್ಟು ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ ಎಂದು ಕುಷ್ಟಗಿ ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಕಳ್ಳ ಸಾಗಾಣಿಕೆ ಆಗಿರುವ ಸಾಧ್ಯತೆ ಹೆಚ್ಚಿದ್ದು, ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಮಹಿಳೆಯನ್ನು ರಕ್ಷಿಸಿದ ಯುವಕರ ಕಾರ್ಯಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಕ್ಕಳ ಕಳ್ಳಸಾಗಣೆ ಪ್ರಕರಣ : ಪಾದ್ರಿ ಸೇರಿದಂತೆ ಇಬ್ಬರು ಸ್ಥಳೀಯರ ಬಂಧನ, 12 ಮಕ್ಕಳ ರಕ್ಷಣೆ