ಗಂಗಾವತಿ (ಕೊಪ್ಪಳ): ಬಹುಜನರಿಗೆ ಸದ್ಬಳಕೆಯಾಗಲೆಂದು ಎರಡು ಕೋಟಿ ರೂಪಾಯಿ ಮೊತ್ತದಲ್ಲಿ ನಿರ್ಮಿಸಿದ್ದ ಕಟ್ಟಡವೊಂದು ಉದ್ಘಾಟನೆಯಾಗಿ ಕೇವಲ ಮೂರು ತಿಂಗಳಲ್ಲಿ ಅದರೊಳಗಿನ ಸೌಲಭ್ಯದ ಎಲ್ಲ ಪರಿಕರಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ನಗರದ ವಿದ್ಯಾಗಿರಿಗೆ (ಎಂಎನ್ಎಂ ಶಾಲೆಗೆ) ಹೋಗುವ ಮಾರ್ಗ ಮಧ್ಯೆದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಪುರಭವನ (ಟೌನ್ಹಾಲ್) ನಿರ್ಮಾಣ ಮಾಡಲಾಗಿದೆ. ನಗರದಲ್ಲಿನ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮದುವೆ, ಉಪನಯನ, ಸೇರಿದಂತೆ ನಾನಾ ಶುಭ ಕಾರ್ಯಗಳಿಗೆ ಉಪಯುಕ್ತವಾಗಲೆಂಬ ಕಾರಣಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರ ನಿರ್ಮಿಸಿತ್ತು. ಪುರಭವನ ಕಟ್ಟಡವನ್ನು ಮಾರ್ಚ್ ತಿಂಗಳಲ್ಲಿ ಆಗಿನ ಶಾಸಕ ಪರಣ್ಣ ಮುನವಳ್ಳಿ ಉದ್ಘಾಟಿಸಿದ್ದರು.
ಉದ್ಘಾಟನೆ ಬಳಿಕ ಹಸ್ತಾಂತರ ಮಾಡುವ ಮತ್ತು ಸ್ವಾಧೀನಕ್ಕೆ ಪಡೆದುಕೊಳ್ಳುವ ವಿಚಾರದಲ್ಲಿ ಲೋಕೋಪಯೋಗಿ ಮತ್ತು ನಗರಸಭೆ ಅಧಿಕಾರಿಗಳ ಮಧ್ಯೆ ವಿವಾದ ಏರ್ಪಟ್ಟು ಪುರಭವನ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಈ ಮಧ್ಯೆ ಚುನಾವಣೆ ಎದುರಾದ ಹಿನ್ನೆಲೆ ಬಹುತೇಕ ಎಲ್ಲ ಇಲಾಖೆಯ ಅಧಿಕಾರಿಗಳು ಕರ್ತವ್ಯದ ಮೇಲೆ ನಿಯೋಜನೆಯಾಗಿದ್ದರಿಂದ ಕಟ್ಟಡದ ಬಗ್ಗೆ ಗಮನಹರಿಸಲು ಸಾಧ್ಯವಾಗಲಿಲ್ಲ.
ಆದರೆ ಊರ ಹೊರಗೆ ಜನಸಂಚಾರ ಕಡಿಮೆ ಇರುವ ಪ್ರದೇಶದಲ್ಲಿ ನಿರ್ಮಿಸಿದ್ದ ಪುರಭವನಕ್ಕೆ ಭದ್ರತೆ, ನಿರ್ವಹಣೆಗಾಗಿ ಸಂಬಂಧಿತ ಇಲಾಖೆಯಿಂದ ಯಾವುದೇ ನಿಯೋಜನೆ ಮಾಡದಿದ್ದರಿಂದ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಕಟ್ಟಡದೊಳಗೆ ಕಲ್ಪಿಸಿದ್ದ ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆ, ಮೂತ್ರಾಲಯ, ಶೌಚಾಲಯ ಕಮೋಡ್ಗಳನ್ನು ಕಿತ್ತು ಹಾಳು ಮಾಡಿದ್ದಾರೆ. ಅಷ್ಟೇ ಅಲ್ಲ, ಕಟ್ಟಡದೊಳಗಿನ ಎಲ್ಲ ಸೌಕರ್ಯಗಳನ್ನು ನಾಶಪಡಿಸಿದ್ದಾರೆ. ಕಟ್ಟಡದ ಪ್ರವೇಶ ದ್ವಾರದ ಬಾಗಿಲು ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಶಾಸಕ ರೆಡ್ಡಿ ಭೇಟಿ: ಕಿಡಿಗೇಡಿಗಳಿಂದ ಹಾನಿಗೊಂಡ ಪುರಭವನಕ್ಕೆ ಶಾಸಕ ಜಿ ಜನಾರ್ದನರೆಡ್ಡಿ ಮಂಗಳವಾರ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಸುದೇಶ, ನಗರಸಭೆ ಕಮೀಷನರ್ ವಿರೂಪಾಕ್ಷ ಮೂರ್ತಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಟ್ಟಡದೊಳಗೆ ಪ್ರವೇಶಿಸುತ್ತಿದ್ದಂತೆ ಹೌಹಾರಿದ ಶಾಸಕ ರೆಡ್ಡಿ, ಇದೊಂದು ಭೂತದ ಬಂಗ್ಲೆ ತರ ಇದೆ. ಕೇವಲ ಮೂರು ತಿಂಗಳ ಹಿಂದೆ ಉದ್ಘಾಟನೆಯಾಗಿದ್ದ ಕಟ್ಟಡ ಇದೇನಾ ಎಂಬ ಶಂಕೆ ಮೂಡಿಸುತ್ತಿದೆ. ಕಿಡಿಗೇಡಿಗಳು ಕಟ್ಟಡದೊಳಗಿನ ಎಲ್ಲ ಸಂಪರ್ಕ, ಸೌಲಭ್ಯ, ಪೀಠೋಪಕರಣಗಳನ್ನು ನಾಶ ಮಾಡಿದ್ದಾರೆ. ಈ ಕೂಡಲೇ ಎಲ್ಲವನ್ನೂ ದುರಸ್ತಿ ಮಾಡಿಸುವಂತೆ ಸಂಬಂಧಿತ ಇಲಾಖೆಗೆ ಸೂಚಿಸಿದ್ದು, 15 ಲಕ್ಷ ವೆಚ್ಚವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೂಡಲೇ ಎಸ್ಟಿಮೇಟ್ ಮಾಡಿ ದುರಸ್ತಿ ಪಡಿಸುವಂತೆ ಸೂಚನೆ ನೀಡಲಾಗಿದೆ. ದುರಸ್ತಿ ಬಳಿಕ ನಗರಸಭೆಗೆ ಹಸ್ತಾಂತರ ಮಾಡಲಾಗುವುದು ಎಂದು ರೆಡ್ಡಿ ಹೇಳಿದರು.