ಕೊಪ್ಪಳ : ಸಿದ್ದರಾಮಯ್ಯ ಸಿಎಂ ಆಗಬೇಕೆಂದು ನಾನು ಹಾಗೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿರುವುದಲ್ಲ. ರಾಜ್ಯದಲ್ಲಿ ಪ್ರವಾಸ ಮಾಡಿದಾಗ ಜನರೇ ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನೀಡಿರುವ ಕಾರ್ಯಕ್ರಮಗಳನ್ನು ಯಾರೂ ನೀಡಲು ಆಗುವುದಿಲ್ಲ. ರಾಜ್ಯದ ಅಭಿವೃದ್ಧಿಯಾಗಬೇಕಾದರೆ ಅದು ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯವೆಂದು ಜನರು ಹೇಳುತ್ತಾರೆ ಎಂದರು.
ಸಿಎಂ ಯಾರಾಗಬೇಕು ಎಂಬುದನ್ನು ನಮ್ಮ ಪಕ್ಷದ ನಾಯಕರು ಹಾಗೂ ಸೋನಿಯಾಗಾಂಧಿ, ರಾಹುಲ್ ಗಾಂಧಿ ತೀರ್ಮಾನ ಮಾಡುತ್ತಾರೆ. ಆದರೆ, ಏನೇ ಆಗಲಿ ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಜನರು ಮಾತನಾಡುತ್ತಿದ್ದಾರೆ ಎಂದರು. ಮುಂದಿನ ಸಿಎಂ ಬಗ್ಗೆ ಮಾತನಾಡಬಾರದು ಎಂದು ಹೈಕಮಾಂಡ್ ಸೂಚನೆ ಕುರಿತು ಪ್ರತಿಕ್ರಿಯಿಸಿ, ನಾನು ಸಿಎಂ ಎಂದು ಘೋಷಣೆ ಮಾಡಿಲ್ಲ. ನಾನು ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ. ನಾನು ರಾಜ್ಯದ ಜನರ ಅಭಿಪ್ರಾಯವನ್ನು ಹೇಳಿದ್ದೇನೆ. ನಾವು ಹೇಳಿದ ತಕ್ಷಣ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುತ್ತಾರಾ ಎಂದರು.
ಹೊನ್ನಾಳಿ ಶಾಸಕ ರೇಣುಕಾಚಾರ್ಯ ಪ್ಲೇಯಿಂಗ್ ಕಾರ್ಡ್ನಲ್ಲಿರುವ ಜೋಕರ್ ಇದ್ದಂಗೆ. ನಮ್ಮ ಪಕ್ಷದ ವಿಷಯ ಆತನಿಗೆ ಏಕೆ? ಜೋಕರ್‌ನನ್ನು ಎಲ್ಲಿ ಬೇಕಾದರೂ ಕೂಡಿಸಿಕೊಳ್ಳಬಹುದು. ಹಾಗೆಯೇ, ರೇಣುಕಾಚಾರ್ಯ ಜೋಕರ್ ಇದ್ದ ಹಾಗೆ. ಆತನ ಬಗ್ಗೆ ನಾನು ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ.
ಚಾಮರಾಜಪೇಟೆಯಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸುವುದಾದರೆ ಅವರಿಗೆ ನೂರಕ್ಕೆ ನೂರರಷ್ಟು ನನ್ನ ಕ್ಷೇತ್ರವನ್ನು ಬಿಟ್ಟುಕೊಡುತ್ತೇನೆ. ಅಲ್ಲದೆ 70 ಸಾವಿರ ಲೀಡ್ನಲ್ಲಿ ಗೆಲ್ಲಿಸಿಕೊಂಡು ಬರುತ್ತೇನೆ. ಅವರು ಬೇರೆ ಕಡೆ ಟೂರ್ ಮಾಡಿದರೆ 25 ಸೀಟ್ ಹೆಚ್ಚಿಗೆ ಬರುತ್ತವೆ. ಹೀಗಾಗಿ, ಕ್ಷೇತ್ರ ಬಿಟ್ಟುಕೊಡಲು ಸಿದ್ದವಾಗಿದ್ದೇನೆ. ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಬರಬೇಕು ಎಂದು ರಾಜ್ಯದ ಜನರು ತೀರ್ಮಾನಿಸಿದ್ದಾರೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.