ಕೊಪ್ಪಳ : ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಜನರು ಸೋಂಕು ಲಕ್ಷಣ ಕಂಡು ಬಂದ ಕೂಡಲೇ ಪರೀಕ್ಷೆಗೊಳಪಟ್ಟು, ಸೋಂಕು ತಗುಲಿರುವುದು ದೃಢಪಟ್ಟರೆ ಚಿಕಿತ್ಸೆಗೊಳಗಾಗುತ್ತಿದ್ದಾರೆ. ಆದ್ರೆ, ಕೆಲವರಲ್ಲಿ ಸೋಂಕಿನ ಲಕ್ಷಣಗಳಿದ್ದರೂ ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗಟಿವ್ ವರದಿ ಬರುತ್ತಿದೆ.
ಹೀಗಾಗಿ, ಸಿಟಿ ಸ್ಕ್ಯಾನ್ ಮಾಡಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಆರ್ಟಿಪಿಸಿಆರ್ ಪರೀಕ್ಷೆಯ ಕಿಟ್ಗಳ ಗುಣಮಟ್ಟದಲ್ಲಿ ಏನಾದರೂ ವ್ಯತ್ಯಾಸಗಳಿವೆಯಾ? ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ರೆ, ಕಿಟ್ಗಳ ಗುಣಮಟ್ಟ ಪರೀಕ್ಷಿಸಿದ ಬಳಿಕವೇ ರವಾನೆಯಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರುಡುತ್ತಿದ್ದು, ಜನರಲ್ಲಿ ಭಯದ ವಾತಾವರಣ ಮೂಡಿಸಿದೆ. ಕೊರೊನಾ ಸೋಂಕು ತಗುಲಿದೆಯಾ ಎಂಬುದನ್ನು ಪರೀಕ್ಷೆಯ ಮೂಲಕ ಕಂಡು ಹಿಡಿಯಲಾಗುತ್ತದೆ.
ಈ ಮೊದಲು ಆರ್ಟಿಪಿಸಿಆರ್ ಪರೀಕ್ಷಾ ವರದಿ ನಿಖರವಾಗಿರುತ್ತದೆ ಎಂದು ಹೇಳುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕಿನ ಲಕ್ಷಗಳಿರುವ ಕೆಲವರ ಸ್ಯಾಂಪಲ್ ಪರೀಕ್ಷೆಯಲ್ಲಿ ನೆಗಟಿವ್ ಬರುತ್ತಿದೆ ಎನ್ನಲಾಗುತ್ತಿದೆ.
ಇದಕ್ಕೆ ಹಲವಾರು ಕಾರಣಗಳು ಕೂಡ ಇರಬಹುದು. ಆದರೆ, ಆರ್ಟಿಪಿಸಿಆರ್ ಕಿಟ್ಗಳ ಗುಣಮಟ್ಟದಲ್ಲಿ ಏನಾದರೂ ವ್ಯತ್ಯಾಸಗಳಿಂದ ಹೀಗೆ ಬರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕಿಟ್ ಗುಣಮಟ್ಟದಲ್ಲಿ ಏನೂ ವ್ಯತ್ಯಾಸವಿಲ್ಲ ಎನ್ನುತ್ತಾರೆ.
ಯಾಕೆಂದರೆ, ಆರ್ಟಿಪಿಸಿಆರ್ ಮೂಲಕ ನಡೆಸುವ ಕೊರೊನಾ ತಪಾಸಣೆಯ ಕಿಟ್ಗಳ ಗುಣಮಟ್ಟವನ್ನು ಪರೀಕ್ಷೆ ಮಾಡಿಯೇ ಜಿಲ್ಲೆಗಳಿಗೆ ರವಾನಿಸಲಾಗುತ್ತದೆ. ರಾಜ್ಯದಲ್ಲಿ ಇದಕ್ಕೊಂದು ಪರಿಣಿತರ ತಂಡವಿದೆ. ಈ ತಂಡದ ಮೂಲಕ ಜಿಲ್ಲೆಗಳಿಗೆ ಕಿಟ್ ರವಾನೆಯಾಗುತ್ತವೆ.
ಕಿಟ್ಗಳನ್ನು ಜಿಲ್ಲೆಗಳಿಗೆ ಟ್ರಾನ್ಸ್ಪೋರ್ಟ್ ಮಾಡುವ ಸಂದರ್ಭದಲ್ಲಿ ಒಂದೆರಡು ಕಿಟ್ಗಳು ಬ್ರೇಕ್ ಆಗಿರುತ್ತವೆಯೇ ಹೊರತು ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ವಿಮ್ಸ್ ಆವರಣದಲ್ಲಿ 'ಗೆಳೆಯರ ಬಳಗ'ದಿಂದ ಉಚಿತ ಆಹಾರ ವಿತರಣೆ
ಕೊಪ್ಪಳ ಜಿಲ್ಲೆಯಲ್ಲಿ ಈವರೆಗೆ ಸುಮಾರು 3 ಲಕ್ಷ ಜನರಿಗೆ ಆರ್ಟಿಪಿಸಿಆರ್ ಮೂಲಕವೇ ಕೊರೊನಾ ಟೆಸ್ಟ್ ನಡೆಸಲಾಗಿದೆ. ಕಿಟ್ಗಳಲ್ಲಿ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಉತ್ತಮ ಗುಣಮಟ್ಟದ ಟೆಸ್ಟ್ ಕಿಟ್ಗಳು ಇರುತ್ತವೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಲಿಂಗರಾಜು ಅವರು.
ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ತಪಾಸಣೆಯು ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ನಡೆಯುತ್ತದೆ. ಸರ್ಕಾರದಿಂದಲೇ ಕೊರೊನಾ ಟೆಸ್ಟ್ ಕಿಟ್ಗಳು ರವಾನೆಯಾಗುತ್ತಿವೆ. ಗುಣಮಟ್ಟ ಪರೀಕ್ಷಿಸಿ ರವಾನೆ ಮಾಡಲಾಗುತ್ತದೆ. ಹೀಗಾಗಿ, ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಾಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.