ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ 9ನೇ ವಾರ್ಡ್ ಸದಸ್ಯ ವಿಕ್ರಮ್ ರಾಯ್ಕರ್ ಉಪಾಧ್ಯಕ್ಷರಾಗಿ 5ನೇ ವಾರ್ಡಿನ ಹಂಪಮ್ಮ ಕೈಲವಾಡಗಿ ಚುನಾಯಿತರಾದರು.
ತಾವರಗೇರಾ ಪಟ್ಟಣ ಪಂಚಾಯತಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳಾ ಮೀಸಲಾತಿ ನಿಗದಿಯಂತೆ ಚುನಾವಣೆ ನಡೆಯಿತು. ಒಟ್ಟು 18 ಸದಸ್ಯ ಬಲದಲ್ಲಿ ಕಾಂಗ್ರೆಸ್ 11, ಬಿಜೆಪಿ 6 ಹಾಗೂ ಪಕ್ಷೇತರ 1 ಸ್ಥಾನವಿದೆ. ಕಾಂಗ್ರೆಸ್ 11 ಹಾಗೂ ಪಕ್ಷೇತರ 1 ಸ್ಥಾನ ಬೆಂಬಲ ದೊಂದಿಗೆ ಒಟ್ಟು 12 ಸ್ಥಾನಗಳ ಪ್ರಾಬಲ್ಯವಿತ್ತು.
ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ವಿಕ್ರಮ್ ರಾಯ್ಕರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 5ನೇ ವಾರ್ಡಿನ ಪಕ್ಷೇತರ ಸದಸ್ಯೆ ಹಂಪಮ್ಮ ಕೈಲವಾಡಗಿ ಬಿಜೆಪಿ ಪರವಾಗಿ, ಪ್ರತಿಸ್ಪರ್ಧಿಯಾಗಿ ಚನ್ನಪ್ಪ ಸಜ್ಜನ, ಶಾಂತಲಾ ಮುಖಯಾಜಿ ನಾಮ ಪತ್ರ ಸಲ್ಲಿಸಿದ್ದರು. ಸದರಿ ಚುನಾವಣೆಯಲ್ಲಿ ಬಿಜೆಪಿಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಚನ್ನಪ್ಪ ಸಜ್ಜನ, ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಶಾಂತಲಾ ಮುಖಯಾಜಿ ಅವರಿಗೆ ತಲಾ 6 ಮತಗಳು. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ವಿಕ್ರಮ್ ರಾಯ್ಕರ್ ಹಾಗೂ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಸದಸ್ಯೆ ಹಂಪಮ್ಮ ಕೈಲವಾಡಗಿ ಅವರಿಗೆ ಕಾಂಗ್ರೆಸ್ ಸದಸ್ಯರ. 11, ಪಕ್ಷೇತರ 1 ಹಾಗೂ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಅವರ ಮತ ಸೇರಿದಂತೆ ಒಟ್ಟು ತಲಾ 13 ಮತಗಳು ಬಂದವು. ಅಂತಿಮವಾಗಿ ವಿಕ್ರಮ ರಾಯ್ಕರ್, ಹಂಪಮ್ಮ ಕೈಲವಾಡಗಿ ಅವರನ್ನು ಅಧ್ಯಕ್ಷ- ಉಪಾಧ್ಯಕ್ಷರೆಂದು ಘೋಷಿಸಿದರು.
ಚುನಾವಣಾಧಿಕಾರಿಯಾಗಿ ತಹಶೀಲ್ದಾರ ಎಂ.ಸಿದ್ದೇಶ ಕಾರ್ಯ ನಿರ್ವಹಿಸಿದರು. ವಿಕ್ರಮ ರಾಯ್ಕರ್ ಹಾಗೂ ಹಂಪಮ್ಮ ಕೈಲವಾಡಗಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆ ಆಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.