ಕುಷ್ಟಗಿ (ಕೊಪ್ಪಳ): ಕಲ್ಲು ಗಣಿಗಾರಿಕೆ ಕ್ವಾರಿಯ ನಿಂತ ನೀರಿನ ಹೊಂಡದ ದಡದಲ್ಲಿ ಆಟವಾಡುತ್ತಿದ್ದ ಬಾಲಕನೋರ್ವ ಕಾಲು ಜಾರಿ ಮುಳುಗಿ ಜಲ ಸಮಾಧಿಯಾಗಿರುವ ಘಟನೆ ತಾಲೂಕಿನ ಬಿಸನಾಳ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ ಶರಣಪ್ಪ ವದೇಗೋಳ (6) ಮೃತ ದುರ್ದೈವಿಯಾಗಿದ್ದಾನೆ. ಗ್ರಾಮದ ಹೊರವಲಯದಲ್ಲಿ ಕಲ್ಲು ಗಣಿಗಾರಿಕೆ ನಂತರ ಕ್ವಾರಿಯನ್ನು ಹಾಗೆಯೇ ಬಿಟ್ಟಿದ್ದಾರೆ. ಈ ಕಲ್ಲು ಕ್ವಾರಿಯಲ್ಲಿ ಮಳೆ ನೀರು ನಿಂತು ಹೊಂಡದಂತಾಗಿದೆ. ಮಧ್ಯಾಹ್ನ 1.30 ರ ವೇಳೆಯಲ್ಲಿ ಈ ಹೊಂಡದಲ್ಲಿ ಬಟ್ಟೆ ಒಗೆಯಲು ಬಂದಿದ್ದ ಅಜ್ಜಿಯೊಂದಿಗೆ ಬಾಲಕ ಮಂಜುನಾಥ ಹಾಗೂ ಇನ್ನೋರ್ವ ಬಾಲಕ ಬಂದಿದ್ದು, ಕೆರೆ ದಡದಲ್ಲಿ ಆಟವಾಡಿಕೊಂಡಿದ್ದರು. ಆಗ ಬಾಲಕ ಏಕಾಏಕಿ ಕಾಲು ಜಾರಿ ಹೊಂಡದಲ್ಲಿ ಬಿದ್ದಿದ್ದಾನೆ.
ಇನ್ನೂ ಮೊಮ್ಮಗ ಬಿದ್ದಿದ್ದು ಕಂಡು ಅಜ್ಜಿ ಚೀರಾಡಿದ್ದಾಳೆ. ಆಗ ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಸೀರೆಯ ಸಹಾಯದಿಂದ ಬಾಲಕನನ್ನು ರಕ್ಷಿಸಲು ಪ್ರಯತ್ನಿಸಿದರೂ ಫಲಕಾರಿಯಾಗಿಲ್ಲ. ಆಗ ಗ್ರಾಮದವರಿಗೆ ಸುದ್ದಿ ಮುಟ್ಟಿಸಿದ್ದು, ಗ್ರಾಮಸ್ಥರು ಬಾಲಕ ಮಂಜುನಾಥನಿಗಾಗಿ ಹುಟುಕಾಟ ನಡೆಸಿದ್ದಾರೆ. ಆಗಲೂ ಬಾಲಕನ ದೇಹ ಪತ್ತೆಯಾಗಿಲ್ಲ.
ಈ ವೇಳೆ ಆಗಮಿಸಿದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ, ಠಾಣಾಧಿಕಾರಿ ಎನ್. ರಾಜು ನೇತೃತ್ವದಲ್ಲಿ ಮೂರು ತಾಸುಗಳವರೆಗೆ ಕಾರ್ಯಾಚರಣೆ ನಡೆಸಿ ಕಡೆಗೂ ಬಾಲಕನ ಶವ ಹೊರಗೆ ತೆಗೆದಿದ್ದಾರೆ. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಶರಣಪ್ಪ ವದೇಗೋಳ ದಂಪತಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಕುಷ್ಟಗಿ ತಾಲೂಕು ಆಸ್ಪತ್ರೆಯಲ್ಲಿ ಬಾಲಕನ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ್ ಆಗಮಿಸಿ ಪರಿಶೀಲಿಸಿದರು.