ಕುಷ್ಟಗಿ (ಕೊಪ್ಪಳ): ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಬನ್ನಟ್ಟಿ ಹಳ್ಳಕ್ಕೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದ್ದು, ಸಂಚಾರಕ್ಕೆ ಜನ ಮತ್ತೆ ಪರದಾಡುವಂತಾಗಿದೆ.
ಕೆಆರ್ಡಿಬಿ ಯೋಜನೆಯಲ್ಲಿ 2016-17ರಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಆರಂಭಗೊಂಡ ಸೇತುವೆ ಕಾಮಗಾರಿ ಗೋಡೆವರೆಗೂ ಬಂದು ಅರ್ಧಕ್ಕೆ ನಿಂತಿದೆ. ಕಳೆದ ಮೂರು ವರ್ಷಗಳಿಂದ ಅರ್ಧಕ್ಕೆ ನಿಂತ ಕಾಮಗಾರಿ ಪುನಾರಂಭಿಸದೇ ಇರುವ ಗುತ್ತಿಗೆದಾರ ಹಾಗೂ ಸೇತುವೆ ಪೂರ್ಣಗೊಳಿಸಿದ ಜನಪ್ರತಿನಿಧಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ದೋಟಿಹಾಳ-ಮುದೇನೂರು-ತಾವರಗೇರಾ ಸಂಪರ್ಕಿಸುವ ರಸ್ತೆ ಸೇತುವೆ ಈ ಹಿಂದೆ ಹಳ್ಳಕ್ಕೆ ಕೊಚ್ಚಿ ಹೋಗಿದ್ದರಿಂದ ಜನ ಸಂಚಾರಕ್ಕಾಗಿ ಪರ್ಯಾಯವಾಗಿ ತಾತ್ಕಾಲಿಕ ರಸ್ತೆ ಮಾಡಲಾಗಿತ್ತು. ಆದರೆ ಕಾಮಗಾರಿ ಅರ್ಧಕ್ಕೆ ನಿಂತು ಮೂರು ವರ್ಷಗಳಾಗಿವೆ. ಕಳೆದ ಸೋಮವಾರ ರಾತ್ರಿ ಪುನಃ ಹಳ್ಳದ ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಈ ಸೇತುವೆ ದಾಟಲು ಜನ ಸರ್ಕಸ್ ಮಾಡುತ್ತಿದ್ದು, ಬೈಕ್ ಸವಾರರು ಇತರರ ಸಹಾಯ ಪಡೆದು ಬೈಕ್ ಎತ್ತೊಯ್ದು ರಸ್ತೆ ದಾಟಬೇಕಿದೆ. ಇಲ್ಲವಾದರೆ ಕುಷ್ಟಗಿ ಮೂಲಕ ತಾವರಗೇರಾ ಊರಿಗೆ 30 ಕಿ.ಮೀ. ಸುತ್ತುವರಿದು ಸಂಚರಿಸಬೇಕಿದೆ. ಈಗ ಸೇತುವೆ ಕೊಚ್ಚಿ ಹೋದ ಪರಿಣಾಮ 20 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ ಎನ್ನುತ್ತಾರೆ ಬಳೂಟಗಿ ಗ್ರಾಮದ ತಿರುಪತಿ ಎಲಿಗಾರ.