ಕೊಪ್ಪಳ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ರಾಜ್ಯ ಸರ್ಕಾರ ಆದೇಶ ಮಾಡಿದೆ. ಅಲ್ಲದೆ ಮಾಸ್ಕ್ ಧರಿಸದೆ ಓಡಾಡೋರಿಗೆ ಹಾಕಲಾಗುತ್ತಿದ್ದ ದಂಡದ ಮೊತ್ತ ಹೆಚ್ಚಿಸಿ ಆದೇಶ ಮಾಡಿದೆ. ಆದರೆ ನಗರದಲ್ಲಿ ಮಾತ್ರ ಜನರು ಇದಕ್ಕೆ ಕ್ಯಾರೇ ಎನ್ನುತ್ತಿಲ್ಲ.
ದಂಡದ ಮೊತ್ತ ಹೆಚ್ಚಿಸಿದ್ದರೂ ಇನ್ನೂ ಆದೇಶ ಪ್ರತಿ ದೊರೆಯದ ಹಿನ್ನೆಲೆಯಲ್ಲಿ ನಗರದಲ್ಲಿ ಈ ಹಿಂದೆ ನಿಗದಿಪಡಿಸಲಾಗಿದ್ದ ಮೊತ್ತದ ದಂಡವನ್ನೇ ಹಾಕುತ್ತಿದ್ದಾರೆ. ಆದರೆ ಜನರು ಮಾತ್ರ ಬೇಜವಾಬ್ದಾರಿಯಿಂದ ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ. ಒಬ್ಬ ಎಎಸ್ಐಗೆ ದಿನಕ್ಕೆ ಕನಿಷ್ಠ ನೂರು ಜನರಿಗಾದರೂ ದಂಡವನ್ನು ವಿಧಿಸಲು ಸೂಚನೆ ನೀಡಲಾಗಿದೆ. ಹೀಗಾಗಿ ಪೊಲೀಸ್ ಸಿಬ್ಬಂದಿ ಮಾಸ್ಕ್ ಧರಿಸದ ಜನರನ್ನು ತಡೆದು ದಂಡ ವಿಧಿಸುತ್ತಿದ್ದಾರೆ.
ಹೀಗೆ ದಂಡ ವಿಧಿಸಲು ಮುಂದಾದಾಗ ಜನರು ಜನಪ್ರತಿನಿಧಿಗಳಿಗೆ ಫೋನ್ ಮಾಡಿ ದಂಡ ಹಾಕದಂತೆ ಒತ್ತಡ ತರುತ್ತಿರುವ ಸನ್ನಿವೇಶ ಈಗ ಸಾಮಾನ್ಯವಾಗಿದೆ. ಇದರಿಂದಾಗಿ ದಂಡ ಹಾಕಲು ಮುಂದಾಗುವ ಪೊಲೀಸ್ ಸಿಬ್ಬಂದಿಗೆ ಇದು ತಲೆನೋವಾಗಿ ಪರಿಣಮಿಸಿದೆ.
ಹಳೆಯ ದಂಡದ ಮೊತ್ತವನ್ನು ಪಾವತಿಸಲು ಹಿಂದೇಟು ಹಾಕುತ್ತಿರುವಾಗ ಈಗ ಮತ್ತೆ ಹೊಸ ದಂಡವನ್ನು ಜನರಿಂದ ಹೇಗೆ ಕಟ್ಟಿಸಿಕೊಳ್ಳಬೇಕು ಎಂಬ ಚಿಂತೆ ಪೊಲೀಸರನ್ನು ಕಾಡಲಾರಂಭಿಸಿದೆ.