ಗಂಗಾವತಿ (ಕೊಪ್ಪಳ): ತಾಲೂಕಿನ ಕಿಲ್ಲಾ ಏರಿಯಾದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿರುವ ಬೆನ್ನಲ್ಲೆ ಅಧಿಕಾರಿಗಳು ಏರಿಯಾವನ್ನು ಸೀಲ್ಡೌನ್ ಮಾಡಿದ್ದಾರೆ. ಆದರೆ, ಸೀಲ್ಡೌನ್ ಏರಿಯಾದಲ್ಲಿ ಮಾತ್ರ ಜನ ಜೀವನ ಸಹಜ ಸ್ಥಿತಿಯಲ್ಲೇ ಮುಂದುವರೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಕಿಲ್ಲಾ ಏರಿಯಾದಲ್ಲಿ ಕೊರೊನಾ ಪ್ರಕರಣ ದಾಖಲಾದರೂ ಅಲ್ಲಿನ ಮಾರುಕಟ್ಟೆಯಲ್ಲಿ ಎಂದಿನಂತೆ ತರಕಾರಿ, ಅಂಗಡಿ ಮಳಿಗೆಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಅಲ್ಲದೇ, ಇದೇ ಏರಿಯಾದಲ್ಲಿರುವ ಚಿಕನ್ ಮತ್ತು ಮಟನ್ ಮಾರುಕಟ್ಟೆಯಲ್ಲೂ ವ್ಯಾಪಾರ ವಹಿವಾಟು ಯಾವುದೇ ತಡೆಯಿಲ್ಲದೆ ಸಾಗಿದೆ.
ಪೊಲೀಸರು, ಮಾಧ್ಯಮ ಪ್ರತಿನಿಧಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಮಾತ್ರವೇ ವ್ಯಾಪಾರಿಗಳು ಮಳಿಗೆ ಬಂದ್ ಮಾಡಿ ಮತ್ತೆ ಕೆಲ ಹೊತ್ತಿನ ಬಳಿಕ ತೆರೆದು ವ್ಯವಹರಿಸುತ್ತಿದ್ದಾರೆ ಎಂಬ ಆರೋಪವೂ ಇದೆ.