ಕೊಪ್ಪಳ: ಎರಡು ತಿಂಗಳ ಲಾಕ್‌ಡೌನ್ ಹಿನ್ನೆಲೆ ಕೊಪ್ಪಳದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಹೊಸ ವಾಹನಗಳ ನೋಂದಣಿ ಅತ್ಯಂತ ಕಡಿಮೆಯಾಗಿದ್ದು, ಆದಾಯಕ್ಕೂ ಕತ್ತರಿ ಬಿದ್ದಿದೆ.
ಸರ್ಕಾರಕ್ಕೆ ಹೆಚ್ಚಿನ ಆದಾಯ ತಂದು ಕೊಡುವ ಇಲಾಖೆಗಳ ಪೈಕಿ ಸಾರಿಗೆ ಇಲಾಖೆಯೂ ಒಂದು. ಹೊಸ ವಾಹನಗಳ ನೋಂದಣಿಯಿಂದ ಸಾರಿಗೆ ಇಲಾಖೆಗೆ ಹೆಚ್ಚಿನ ಆದಾಯ ಬರುತ್ತದೆ. ಆದರೆ, ಈ ವರ್ಷ ಲಾಕ್‌ಡೌನ್‌ನಿಂದಾಗಿ ಆರ್ಥಿಕ ವರ್ಷ ಪ್ರಾರಂಭದಲ್ಲಿಯೇ ಆದಾಯ ಖೋತಾ ಹೊಡೆದಿದೆ.
ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಿನೊಳಗೆ 337 ಹಾಗೂ ಮೇ ತಿಂಗಳಲ್ಲಿ 577 ದ್ವಿಚಕ್ರ ವಾಹನಗಳು ನೋಂದಣಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಅತ್ಯಂತ ಕಡಿಮೆ. ಕಳೆದ ವರ್ಷ ಈ ವೇಳೆಯಲ್ಲಿ 1500 ರಿಂದ 2000 ದ್ವಿಚಕ್ರ ವಾಹನಗಳು ನೋಂದಣಿಯಾಗಿದ್ದವು.

ಈ ಬಗ್ಗೆ ಮಾತನಾಡಿರುವ ಕೊಪ್ಪಳ ಆರ್ಟಿಒ ಶೇಖರ್ ಅವರು, ಕಳೆದ ವರ್ಷ ಜಿಲ್ಲೆಗೆ 44.48 ಕೋಟಿ ರಾಜಸ್ವ ಸಂಗ್ರಹಿಸುವ ಗುರಿ ಇತ್ತು. ಆದರೆ, ನೀಡಿದ ಗುರಿಗಿಂತಲೂ ಹೆಚ್ಚು ಅಂದರೆ 48.46 ಕೋಟಿ ರೂ. ರಾಜಸ್ವ ಕಲೆಕ್ಟ್ ಮಾಡಲಾಗಿತ್ತು. ಈ ಸಾಲಿನಲ್ಲಿ 45.46 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ಇದೆ. ಆದರೆ, ಲಾಕ್‌ಡೌನ್‌ನಿಂದಾಗಿ ವಾಹನಗಳು ನೋಂದಣಿಯಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ನೋಂದಣಿಯಾಗಬಹುದು ಎಂಬ ನಿರೀಕ್ಷೆ ಇದೆ ಎಂದರು.