ಗಂಗಾವತಿ: ನಗರದ ಇಲಾಹಿ ಕಾಲೊನಿ ಮತ್ತು ಪಂಪಾನಗರದ ವ್ಯಕ್ತಿಗಳಿಗೆ ಕೊರೊನಾ ಸೋಂಕು ಹರಡಿದೆ ಎಂಬ ಸುದ್ದಿ ನಗರದಲ್ಲಿ ವ್ಯಾಪಕವಾಗಿ ಹರಡಿದ್ದು, ಇದರಿಂದ ಭೀತಿಗೊಳಗಾದ ಜನ ಸರ್ಕಾರಿ ಆಸ್ಪತ್ರೆಗಳಿಗೆ ದಾಂಗುಡಿ ಇಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಹೈದರಾಬಾದ್ನಿಂದ ಬಂದ ಇಲ್ಲಿನ ಪಂಪಾನಗರದ ವ್ಯಕ್ತಿ ಹಾಗೂ ಇರಾನ್ ದೇಶದ ಖಾಸ್ರಾದಿಂದ ಬಂದ ಇಲಾಹಿ ಕಾಲೊನಿಯ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಹರಡಿದೆ ಎಂಬ ಗಾಳಿಸುದ್ದಿ ವ್ಯಾಪಕವಾಗಿ ಹರಡಿದೆ.
ಇದರಿಂದಾಗಿ ಸಣ್ಣ ಪ್ರಮಾಣದ ತಲೆನೋವು, ಧೂಳಿನ ಕೆಮ್ಮು, ತಂಪು ಪದಾರ್ಥ ತಿಂದವರಲ್ಲಿ ಕಾಣಿಸಿಕೊಳ್ಳುವ ಗಂಟಲು ನೋವಿದ್ದರೂ ಸಹ ಜನ ಕೊರೊನಾ ಭೀತಿಯಿಂದಾಗಿ ಆಸ್ಪತ್ರೆಗಳತ್ತ ಓಡುತ್ತಿರುವ ದೃಶ್ಯ ನಗರದಲ್ಲಿ ಸಹಜವಾಗಿ ಕಾಣಿಸಿಕೊಳ್ಳುತ್ತಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲೆಯಲ್ಲಿ ಯಾವ ವ್ಯಕ್ತಿಗೂ ಕೊರೊನಾ ಸೋಂಕು ಇಲ್ಲ. ಹಾಗೇನಾದ್ರೂ ಕಂಡು ಬಂದಲ್ಲಿ ಚಿಕಿತ್ಸೆ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.