ಹುಬ್ಬಳ್ಳಿ: 2ನೇ ವಾರದ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಬೆಳ್ಳಂ ಬೆಳಗ್ಗೆ ಹುಬ್ಬಳ್ಳಿ ಪೊಲೀಸರು ಫೀಲ್ಡಿಳಿದಿದ್ದಾರೆ. ನಗರದ ಚೆನ್ನಮ್ಮ ವೃತ್ತದಲ್ಲಿ ಪೊಲೀಸರಿಂದ ವಾಹನ ತಪಾಸಣೆ ನಡೆಯುತ್ತಿದೆ. ಕೊರೊನಾ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಜತೆಗೆ ಅನಗತ್ಯವಾಗಿ ರಸ್ತೆಗಿಳಿದವರಿಗೆ ದಂಡ ವಿಧಿಸುತ್ತಿದ್ದಾರೆ.
ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರ್ಕೆಟ್ ಸಂಪೂರ್ಣ ಬಂದ್ ಆಗಿವೆ. ದುರ್ಗದ ಬೈಲ್, ಜನತಾ ಬಜಾರ್ ಸೇರಿದಂತೆ ವಿವಿಧ ಮಾರ್ಕೆಟ್ಗಳಲ್ಲಿ ಕಠಿಣ ನಿಯಮ ಜಾರಿ ಮಾಡಲಾಗಿದೆ. ಬೆಳಗ್ಗೆಯಿಂದಲೇ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಮಾರ್ಕೆಟ್ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಪೊಲೀಸರು ಗಸ್ತು ತಿರುಗುತ್ತಿರುವುದರಿಂದ ಜನರ ಸಂಚಾರಕ್ಕೆ ಬ್ರೇಕ್ ಬಿದ್ದಿದೆ.
ಬಸ್ ಸಂಚಾರ ಎಂದಿನಂತೆ ಶುರುವಾದರೂ ವಿರಳವಾಗಿವೆ. ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಬಸ್ ಸಂಚರಿಸುತ್ತಿವೆ. ಆದರೂ ನಗರ ಸಾರಿಗೆ ಹಾಗೂ ಅಂತರ ಜಿಲ್ಲಾ ಸಾರಿಗೆ ಬಸ್ ಸಂಚರಿಸುತ್ತಿದ್ದು, ಪ್ರಯಾಣಿಕರ ಅವಶ್ಯಕತೆಗೆ ತಕ್ಕಂತೆ ಸಂಚರಿಸುತ್ತಿವೆ.
ಕೊಪ್ಪಳದಲ್ಲಿ ಬಂದ್ ನೀರಸ:
ಕೊಪ್ಪಳದಲ್ಲಿ 2ನೇ ವಾರದ ವೀಕೆಂಡ್ ಕರ್ಫ್ಯೂ ಹೆಸರಿಗೆ ಮಾತ್ರ ಸೀಮಿತವಾಗಿದೆ. ಇಂದು (ಶನಿವಾರ) ಬೆಳಗ್ಗೆ ನಗರದಲ್ಲಿ ಎಂದಿನಂತೆ ಬೀದಿ ಬದಿ ಅಂಗಡಿಗಳು, ಹೋಟೆಲ್ ಹಾಗೂ ಟೀ ಸ್ಟಾಲ್ ಗಳು ತೆರೆದಿವೆ. ಹೋಟೆಲ್ಗಳಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶ ನೀಡಿದ್ದರೂ ಸರ್ಕಾರದ ಆದೇಶ ಉಲ್ಲಂಘಿಸಿ ಮಾಲೀಕರು ಉಪಹಾರ ನೀಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಇದನ್ನೂ ಓದಿ: ಸಂಕ್ರಾಂತಿ ಸಂಭ್ರಮದ ನಡುವೆ 2ನೇ ವಾರದ ವೀಕೆಂಡ್ ಕರ್ಫ್ಯೂ ಜಾರಿ: ಬೆರಳೆಣಿಕೆಯಷ್ಟು ಬಸ್ ಸಂಚಾರ