ಗಂಗಾವತಿ: ಪ್ರತಿ ನಿಮಿಷಕ್ಕೆ 500 ಲೀಟರ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಆಕ್ಸಿಜನ್ ಉತ್ಪಾದಕ ಘಟಕ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪನೆಯಾಗುತ್ತಿದ್ದು, ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ವೇದಿಕೆ ಮೂಲಕ ಉದ್ಘಾಟಿಸುವರು.
ಆಕ್ಸಿಜನ್ ಘಟಕ ಸ್ಥಾಪನೆ ಸಂಬಂಧ ತಮಿಳುನಾಡಿನ ಪೆರಂಬದೂರಿನಿಂದ ಈಗಾಗಲೇ ಬಿಡಿಭಾಗಗಳು ರವಾನೆಯಾಗಿವೆ. ಮಂಗಳವಾರದಿಂದ ಎರಡು-ಮೂರು ದಿನಗಳ ಕಾಲ ಇಲ್ಲಿನ ವೈದ್ಯರು ಟ್ರಯಲ್ ರನ್(ಪ್ರಾಯೋಗಿಕ ಪರೀಕ್ಷೆ) ಮಾಡಲು ನಿರ್ಧರಿಸಿದ್ದಾರೆ.
ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ತೀವ್ರ ಆಮ್ಲಜನಕದ ಕೊರತೆ ಉಂಟಾಗಿ ಅಪಾರ ಸಾವು-ನೋವುಗಳಾಗಿದ್ದವು. ಇದನ್ನು ಗಮನಿಸಿದ ಸರ್ಕಾರ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರತ್ಯೇಕ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಮುಂದಾಗಿದೆ.
ಇದನ್ನೂ ಓದಿ: ಅವ್ಯವಸ್ಥೆ ಸರಿದೂಗಿಸಲು ಕಿಮ್ಸ್ ಹೊಸ ಪ್ಲಾನ್: ಸಿಬ್ಬಂದಿ ಮೇಲೆ ಹದ್ದಿನ ಕಣ್ಣಿಡಲು ಜಿಯೋ ಫೆನ್ಸಿಂಗ್!
80 ಲಕ್ಷ ರೂಪಾಯಿ ಮೊತ್ತದಲ್ಲಿ ಘಟಕ ನಿರ್ಮಾಣವಾಗಲಿದ್ದು, ಹೆಚ್ಚುವರಿ ಸಿವಿಲ್ ಕಾಮಗಾರಿಗಳಾದ ಪ್ರತ್ಯೇಕ ಟ್ರಾನ್ಸ್ಫಾರ್ಮರ್, ವಿದ್ಯುತ್ ಲೈನ್, ಜನರೇಟರ್ನಂತಹ ಸೌಲಭ್ಯ ಒದಗಿಸಲು ಸುಮಾರು 50 ಲಕ್ಷ ರೂಪಾಯಿ ವೆಚ್ಚ ಅಂದಾಜಿಸಲಾಗಿದೆ.
ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಘಟಕ ಕಾಮಗಾರಿಯನ್ನು ಪರಿಶೀಲಿಸಿದ್ದಾರೆ. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಈಶ್ವರ ಸವುಡಿ ಘಟಕದ ತಾಂತ್ರಿಕ ಮಾಹಿತಿ, ಉತ್ಪಾದನಾ ಸಾಮರ್ಥ್ಯ, ಇದರಿಂದ ರೋಗಿಗಳಿಗೆ ಸಿಗಲಿರುವ ಸೌಲಭ್ಯ ಮೊದಲಾದವುಗಳ ಬಗ್ಗೆ ಮಾಹಿತಿ ನೀಡಿದರು.