ಕೊಪ್ಪಳ: ತಾಲೂಕಿನ ಗುನ್ನಳ್ಳಿ ಹಾಗೂ ಹೊರತಟ್ನಾಳ್ ಗ್ರಾಮಗಳ ಮಧ್ಯದಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿರುವುದಕ್ಕೆ ಉಭಯ ಗ್ರಾಮಗಳ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಕಲ್ಲು ಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.
ಗುನ್ನಳ್ಳಿ ಮತ್ತು ಹೊರತಟ್ನಾಳ್ ಗ್ರಾಮಗಳ ಮಧ್ಯದಲ್ಲಿರುವ ಸರ್ವೆ ನಂಬರ್ 42/2, 42/3 ಹಾಗೂ 60/1ರಲ್ಲಿ ಕಲ್ಲು ಕ್ವಾರಿ ಹಾಗೂ ಕ್ರಷರ್ ಮಷಿನ್ ಅಳವಡಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಈ ಪ್ರದೇಶದ ಸುತ್ತಮುತ್ತ ನೂರಾರು ಎಕರೆ ಪ್ರದೇಶ ನೀರಾವರಿ ಭೂಮಿಯಿದ್ದು, ಕೃಷಿ ಮಾಡುತ್ತಿದ್ದೇವೆ. ಈಗ ಈ ಭಾಗದಲ್ಲಿ ಕಲ್ಲು ಗಣಿಗಾರಿಕೆ, ಕ್ರಷರ್ ಮಷಿನ್ ಅಳವಡಿಕೆಯಿಂದ ಕೃಷಿಕರಿಗೆ ತೊಂದರೆಯಾಗಲಿದ್ದು, ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಗಣಿಗಾರಿಕೆಯಿಂದ ವಾಯುಮಾಲಿನ್ಯ, ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯ ಉಂಟಾಗುತ್ತದೆ. ಕೃಷಿ ಹಾಗೂ ಹೈನುಗಾರಿಕೆ ಮಾಡಿಕೊಂಡು ಕೆಲವರು ಹೊಲದಲ್ಲಿಯೇ ವಾಸಿಸುತ್ತಿದ್ದಾರೆ. ಹೀಗಾಗಿ ಕಲ್ಲು ಗಣಿಗಾರಿಕೆಗೆ ಹಾಗೂ ಕ್ರಶರ್ ಮಷಿನ್ ಅಳವಡಿಕೆಗೆ ನೀಡಿರುವ ಅನುಮತಿಯನ್ನು ಕೂಡಲೇ ರದ್ದುಪಡಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.