ಕೊಪ್ಪಳ: ಕಳೆದ ಎರಡು ತಿಂಗಳ ಹಿಂದೆ ದೇಶದಲ್ಲಿ ಸಂಸತ್ ಚುನಾವಣೆ ನಡೆಯಿತು. ಮತದಾರರ ಇವಿಎಂ ಮೂಲಕ ತಮ್ಮ ಹಕ್ಕು ಚಲಾಯಿಸಿದರು. ಇದೇ ಮತದಾನದ ತದ್ರೂಪದಂತೆಯೇ ಕಾರಟಗಿಯಲ್ಲಿ ಸಂಸತ್ ಚುನಾವಣೆ ನಡೆದಿದೆ.
ಹೌದು, ಥೇಟ್ ಇವಿಎಂ ಮಾದರಿಯಲ್ಲಿಯೇ ಮೊಬೈಲ್ ಮೂಲಕವೇ ವೋಟಿಂಗ್ ನಡೆದಿದೆ. ಕಂಟ್ರೋಲ್ ಯೂನಿಟ್ ಹಾಗೂ ಬ್ಯಾಲೆಟ್ ಯೂನಿಟ್‍ಗಳಾಗಿ ಮೊಬೈಲ್ ಬಳಸಿಕೊಂಡು ವೋಟಿಂಗ್ ನಡೆಸಿದ್ದಾರೆ. ಇಂತಹ ಒಂದು ವಿಶೇಷ ಚುನಾವಣೆ ನಡೆದಿರೋದು ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿರುವ ಕರ್ನಾಟಕ ಸರ್ಕಾರಿ ಪಬ್ಲಿಕ್ ಸ್ಕೂಲ್‍ನಲ್ಲಿ.
ಶಾಲಾ ಸಂಸತ್ ರಚನೆಗಾಗಿ ಶಿಕ್ಷಕರು ಈ ಚುನಾವಣೆ ನಡೆಸಿದ್ದು, ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿರೋದನ್ನು ಮೆಚ್ಚಲೇಬೇಕು. ಶಾಲಾ ಸಂಸತ್ತಿನ ಪ್ರಧಾನಮಂತ್ರಿ ಸೇರಿದಂತೆ ಒಟ್ಟು 20 ಹುದ್ದೆಗಳಿಗೆ ಈ ಚುನಾವಣೆ ನಡೆದಿದೆ. ಗೂಗಲ್‍ನಲ್ಲಿ ವೋಟಿಂಗ್ ಮಷಿನ್ ಎಂಬ ಆ್ಯಪ್ ಬಳಸಿಕೊಂಡು ಇವಿಎಂ ಮಾದರಿಯಲ್ಲಿಯೇ ಚುನಾವಣೆ ನಡೆಸುವ ಮೂಲಕ ವಿಶೇಷತೆಗೆ ಕಾರಣವಾಗಿದೆ.
ಶಾಲೆಯಲ್ಲಿ ಒಟ್ಟು 760 ಮಕ್ಕಳು ವೋಟ್ ಮಾಡಿದ್ದಾರೆ. ವೋಟ್ ಮಾಡಲು ವಿದ್ಯಾರ್ಥಿಗಳು ಆಧಾರ್ ಕಾರ್ಡ್‍ನೊಂದಿಗೆ ಸಾಲಿನಲ್ಲಿ ನಿಂತುಕೊಂಡು ವೋಟ್ ಮಾಡಿದ್ದಾರೆ. ಇವಿಎಂನಲ್ಲಿರುವಂತೆ ತಮ್ಮ ಆಯ್ಕೆಯ ಅಭ್ಯರ್ಥಿಯ ಮುಂದೆ ಇರುವ ಬಟನ್ ಪ್ರೆಸ್ ಮಾಡುವ ಮೂಲಕ ತಮ್ಮ ಪ್ರತಿನಿಧಿಗೆ ವೋಟ್ ಹಾಕಿದ್ದಾರೆ.
ಒಟ್ಟು 20 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 10 ವಿದ್ಯಾರ್ಥಿಗಳಿಗೆ ಹಾಗೂ 10 ವಿದ್ಯಾರ್ಥಿನಿಯರಿಗೆ ಸ್ಥಾನ ಮೀಸಲಿಡಲಾಗಿತ್ತು. ಈ 20 ಸ್ಥಾನಗಳಿಗೆ ಒಟ್ಟು 52 ವಿದ್ಯಾರ್ಥಿಗಳು ಕಂಟೆಸ್ಟೆಂಟ್ ಮಾಡಿದ್ದರು. ಸೇಮ್ ಇವಿಎಂ ಮಾದರಿಯಲ್ಲಿಯೇ ಒಂದು ಕಂಟ್ರೋಲ್ ಯೂನಿಟ್ ಹಾಗೂ ಒಂದು ಬ್ಯಾಲೆಟ್ ಯೂನಿಟ್‍ಗಾಗಿ ಮೊಬೈಲ್ ಬಳಸಿಕೊಳ್ಳಲಾಗಿತ್ತು. ಬ್ಯಾಲೆಟ್ ಯೂನಿಟ್‍ನಲ್ಲಿ ಕಂಟೆಸ್ಟೆಂಟ್ ವಿದ್ಯಾರ್ಥಿಗಳ ಫೋಟೋ ಸಹ ಅಳವಡಿಸಲಾಗಿತ್ತು ಎನ್ನುತ್ತಾರೆ ಶಾಲೆಯ ಶಿಕ್ಷಕ ಶರಣಯ್ಯ.
ವಿದ್ಯಾರ್ಥಿಗಳಲ್ಲಿ ಚುನಾವಣೆ ಮತ್ತು ಮತದಾನದ ಪ್ರಕ್ರಿಯೆಗಳ ಪ್ರಸ್ತುತ ಸನ್ನಿವೇಶದ ಕುರಿತ ತಿಳಿವಳಿಕೆಯ ಜೊತೆಗೆ ತಂತ್ರಜ್ಞಾನ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಸಲು ಈ ಶಾಲೆಯ ಶಿಕ್ಷಕರು ತಮ್ಮ ಶಾಲೆಯ ಸಂಸತ್ ಚುನಾವಣೆಗೆ ನಮ್ಮ ಚುನಾವಣೆ ವ್ಯವಸ್ಥೆ ಅಳವಡಿಸಿಕೊಂಡಿದ್ದು ಮೆಚ್ಚುಗೆಗೆ ಕಾರಣವಾಗಿದೆ.