ಕೊಪ್ಪಳ: ಖಾಸಗಿ ಫೈನಾನ್ಸ್ನವರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ವ್ಯಕ್ತಿಯೋರ್ವ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ. ಬೇಸತ್ತ ವ್ಯಕ್ತಿ ತನ್ನ ಕ್ರೂಸರ್ ವಾಹನಕ್ಕೆ ನಡುರಸ್ತೆಯಲ್ಲಿಯೇ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಗರದ ಬಸ್ ನಿಲ್ದಾಣದ ಬಳಿ ನಡೆದಿದೆ.
ವಾಹನದ ಮಾಲೀಕ ಸುಭಾಷಚಂದ್ರ ಎಂಬುವವರು ನಡುರಸ್ತೆಯಲ್ಲಿ ವಾಹನಕ್ಕೆ ಬೆಂಕಿ ಹಚ್ಚಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಮಂಜುಳಾ ದಾನಸೂರ ಎಂಬುವವರ ಹೆಸರಿನಲ್ಲಿರುವ ಈ ವಾಹನ ಬಾಗಲಕೋಟೆ ಆರ್ಟಿಒ ಕಚೇರಿಯಲ್ಲಿ ನೋಂದಣಿಯಾಗಿತ್ತು. ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಸಾಲದ ಹಿನ್ನೆಲೆಯಲ್ಲಿ ವಾಹನವನ್ನು ಧಾರವಾಡದ ಆರ್ಟಿಒ ಬ್ಲಾಕ್ ಲಿಸ್ಟ್ಗೆ ಸೇರಿಸಿದೆಯಂತೆ.
ವಾಹನದ ಎರಡು ಕಂತು ಬಾಕಿ ಇದ್ದ ಹಿನ್ನೆಲೆಯಲ್ಲಿ ಜನವರಿ 28 ರಂದು ವಾಹನದ ಮಾಲೀಕ ಕಂತು ಕಟ್ಟಬೇಕಿತ್ತು. ಹಣ ಕಟ್ಟುವಂತೆ ಫೈನಾನ್ಸ್ನವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಾಹನಕ್ಕೂ ಬೆಂಕಿ ಹಚ್ಚಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವುದಾಗಿ ಮಾಲೀಕ ಸುಭಾಷಚಂದ್ರ ಪೊಲೀಸರಿಗೆ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಚಾಲಕ: ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ
ನಡುರಸ್ತೆಯಲ್ಲಿ ಕ್ರೂಷರ್ ವಾಹನ ಹೊತ್ತಿ ಉರಿದಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ವಾಹನದ ಮಾಲೀಕ ಸುಭಾಷಚಂದ್ರ ಸದ್ಯ ಕೊಪ್ಪಳ ನಗರ ಪೊಲೀಸರ ವಶದಲ್ಲಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ