ಕೊಪ್ಪಳ: ಸ್ವಂತ ಸೂರಿಲ್ಲದೆ ಶೌಚಾಲಯದಲ್ಲೇ ಜೀವನ ಸಾಗಿಸುತ್ತ ಬದುಕಿನ ಸಂಧ್ಯಾಕಾಲದಲ್ಲಿರುವ ಅಜ್ಜಿಯೊಬ್ಬರು ದುಡಿದು ತನ್ನಿಬ್ಬರು ಮಕ್ಕಳನ್ನು ಸಾಕುತ್ತಿರುವಂತಹ ಮನಕಲಕುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇ ಅರಳಿಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಂಡುಬಂದಿದೆ.
ಬೀರಲದಿನ್ನಿ ಗ್ರಾಮದ ಲಕ್ಷ್ಮವ್ವ ಎಂಬ ವೃದ್ಧೆ ಮತ್ತು ಆಕೆಯ ಇಬ್ಬರು ಮಕ್ಕಳು ಶೌಚಾಲಯದಲ್ಲಿ ದಯನೀಯ ಸ್ಥಿತಿಯಲ್ಲಿ ಜೀವನ ಕಳೆಯುತ್ತಿದ್ದಾರೆ. ಲಕ್ಷ್ಮವ್ವ ಹಾಗೂ ಹೊನ್ನನಗೌಡ ದಂಪತಿಗೆ ಒಟ್ಟು ಮೂವರು ಮಕ್ಕಳು. ಆ ಪೈಕಿ ಒಬ್ಬರು ಮದುವೆ ಮಾಡಿಕೊಂಡು ಬೇರೆ ಕಡೆ ಸಂಸಾರ ಮಾಡುತ್ತಿದ್ದಾರೆ. ಹೊನ್ನಪ್ಪ ಹಾಗೂ ಕನಕಪ್ಪ ಎಂಬಿಬ್ಬರು ಮಕ್ಕಳು ಐದು ವರ್ಷದ ಹಿಂದೆ ಬೋರ್ವೆಲ್ ಕೊರೆಸುವ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಮಾನಸಿಕ ಒತ್ತಡದಿಂದಾಗಿ ಕಳೆದ ಐದು ವರ್ಷದಿಂದ ಖಿನ್ನತೆಗೊಳಗಾಗಿದ್ದಾರೆ. ಹೀಗಾಗಿ ವೃದ್ಧೆಯೇ ಕೂಲಿನಾಲಿ ಮಾಡಿಕೊಂಡು ಮಕ್ಕಳನ್ನು ಸಾಕುತ್ತಿದ್ದಾಳೆ.
ಕಳೆದ ಮೂರು ವರ್ಷದ ಹಿಂದೆ ಸುರಿದ ಧಾರಾಕಾರ ಮಳೆಗೆ ವೃದ್ಧೆಯ ಕುಟುಂಬ ವಾಸವಿದ್ದ ಮನೆ ಸಂಪೂರ್ಣ ಬಿದ್ದುಹೋಗಿದೆ. ವಾಸಕ್ಕೆ ಮನೆ ಇಲ್ಲದಿರುವುದಿಂದ ಮುರುಕಲು ಮನೆಯಲ್ಲಿ ವಾಸಿಸುತ್ತಿರುವ ವೃದ್ಧೆ ಅಡುಗೆ ಸಾಮಗ್ರಿಗಳನ್ನು ಮನೆಯ ಮುಂದಿನ ಶೌಚಾಲಯದಲ್ಲಿಟ್ಟುಕೊಂಡು ಬದುಕು ನಡೆಸುತ್ತಿದ್ದಾಳೆ. ವೃದ್ಧೆಯ ಮಕ್ಕಳಿಬ್ಬರು ಹೊಲದಲ್ಲಿರುವ ಪುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ.
ಒಟ್ಟಿನಲ್ಲಿ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್ ಅವರು ಈಗ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿದ್ದಾರೆ. ವೃದ್ಧೆ ಲಕ್ಷ್ಮಮ್ಮಳ ಸ್ಥಿತಿ ಗಮನಿಸಿ ಆಶ್ರಯ ಯೋಜನೆಯಡಿ ಸೂರು ಒದಗಿಸುವ ಕೆಲಸ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.