ಗಂಗಾವತಿ: ಇದೇ ಹಣಕಾಸು ವರ್ಷದಲ್ಲಿ ಮಂಡಿಸಲಿರುವ ನಗರಸಭೆಯ ಬಜೆಟ್ ಬಗ್ಗೆ ಸಾರ್ವಜನಿಕರು ಸೂಕ್ತ ಸಲಹೆ, ಸೂಚನೆ ನೀಡುವಂತೆ ಕೋರಿ ನಗರಸಭೆಯ ಅಧಿಕಾರಿಗಳು ಆಯೋಜಿಸಿದ್ದ ಸಭೆಗೆ ಸ್ವತಃ ಪೌರಾಯುಕ್ತರೇ ಗೈರು ಹಾಜರಾದ ಹಿನ್ನೆಲೆ ಪ್ರತಿಭಟನೆ ನಡೆಯಿತು.
ಪೌರಾಯುಕ್ತ ಎಸ್. ಎಫ್.ಈಳಿಗೇರ ಕೋಟರ್ ಯಾವುದೋ ನೆಪ ಹೇಳಿ ಸಾರ್ವಜನಿಕ ಸಭೆಯಿಂದ ದೂರ ಉಳಿದರು. ಇದರಿಂದಾಗಿ ಸಭೆಗೆ ಬಂದಿದ್ದ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿದರು. ಇನ್ನೂ ಗೈರಾಗುವ ಬಗ್ಗೆ ಮೊದಲೇ ಯಾವುದೇ ಮಾಹಿತಿ ನೀಡದಿರುವ ನಗರಸಭೆ ಸಿಬ್ಬಂದಿಯ ವೈಖರಿ ಖಂಡಿಸಿ ಕೆಲ ಸಂಘಟನೆಗಳ ಪದಾಧಿಕಾರಿಗಳು ಸಾಂಕೇತಿಕ ಪ್ರತಿಭಟನೆ ನಡೆಸಿದರು.