ಕುಷ್ಟಗಿ (ಕೊಪ್ಪಳ): ಜಿಲ್ಲೆಯಲ್ಲಿ ಅದರಲ್ಲೂ ಕುಷ್ಟಗಿ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳ ಏರುಗತಿ ಪರಿಸ್ಥಿತಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸುವುದು ಬರೀ ಬಾಯಿ ಮಾತಾಗಿದೆ. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಜನ ಸಾಮಾಜಿಕ ಅಂತರ ಮರೆತು ವರ್ತಿಸಿರುವುದು ಕಂಡು ಬಂತು.
ತಾಲೂಕಿನ ಹನುಮಸಾಗರ ಬಳಿಯ ಮುದಟಗಿಯಲ್ಲಿ ಕೃಷ್ಣಾ ಬಿಸ್ಕೀಂ ಕೊಪ್ಪಳ ಏತ ನೀರಾವರಿ ಯೋಜನೆಯ ಹನುಮಸಾಗರ ಬ್ರ್ಯಾಂಚ್ ಕಾಲುವೆ ಮೂಲಕ 36 ಕೆರೆಗಳ ತುಂಬಿಸುವ ಯೋಜನೆಯ ಹಂತ-2ರ ಕಾಮಗಾರಿ ಭೂಮಿ ಪೂಜೆ ಸರ್ಕಾರಿ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರದ ವ್ಯವಸ್ಥೆ ನಂತರ ಕಂಡು ಬರಲಿಲ್ಲ. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಜನ ಸಾಮಾಜಿಕ ಅಂತರ ಮರೆತು ವರ್ತಿಸಿರುವುದು ಕಂಡು ಬಂತು.
ಹನುಮಸಾಗರ ಪಿಎಸ್ಐ ಅಮರೇಶ ಹುಬ್ಬಳ್ಳಿ ಅವರು ಈ ದಿನ (ಜೂ.26) ಕುಷ್ಟಗಿ ತಾಲೂಕಿನಲ್ಲಿ 6 ಪಾಸಿಟಿವ್ ಕೇಸ್ ಬಗ್ಗೆ ಎಚ್ಚರಿಸಿದ್ದರೂ ಕೊರೊನಾ ಬಂದರೂ ಬರಲಿ ನಮಗೇನು ಎನ್ನುವ ಮುಖಭಾವ ಅವರಲ್ಲಿ ಕಂಡು ಬಂತು. ವೇದಿಕೆಯ ಬಲ ಭಾಗದ ಮೂಲೆಯಲ್ಲಿ ಬಿಜೆಪಿ ಕಾರ್ಯಕರ್ತರ ದಂಡು ಪೊಲೀಸರ ಹೆದರಿಕೆಗೆ ಮಾಸ್ಕ್ ಧರಿಸಿದ್ದರೇ ವಿನಃ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿಂತಿದ್ದರು. ಸಚಿವರಿಗೆ ಸನ್ಮಾನ, ಮನವಿ ಸಂದರ್ಭದಲ್ಲಿ ಹಾಗೂ ಸಚಿವರು ನಿರ್ಗಮಿಸಿ ಕಾರು ಹತ್ತುವರೆಗೂ ಸಾಮಾಜಿಕ ಅಂತರದ ಪರಿವೇ ಇರಲಿಲ್ಲ.
ಈ ನಡುವೆಯೂ ಕೆಲವರು ಸಚಿವರೊಂದಿಗೆ ಪೊಲೀಸ್ ಭದ್ರತೆ ಲೆಕ್ಕಿಸದೇ ಸೆಲ್ಫಿಗೆ ಮುಗಿ ಬಿದ್ದಿರುವುದು ಕಂಡು ಬಂತು. ಕೊರೊನಾ ವೈರಸ್ ಹಾವಳಿಯಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ವ್ಯವಸ್ಥೆಯಲ್ಲಿ ಕಾರ್ಯಕ್ರಮ ನಡೆಸುವುದು ಸೂಕ್ತವೇ ಎನ್ನುವುದು ಪ್ರಶ್ನಾರ್ಹವಾಗಿದೆ.