ಕುಷ್ಟಗಿ(ಕೊಪ್ಪಳ): ದಿನಸಿ ಅಂಗಡಿ, ಮದ್ಯದ ಅಂಗಡಿಯಲ್ಲಿ ಜನ ಸರದಿಯಲ್ಲಿ ನಿಂತು ಖರೀದಿಸುವ ರೀತಿಯಲ್ಲಿ ಕೋವ್ಯಾಕ್ಸಿನ್ ಲಸಿಕೆಯನ್ನು ಸರದಿಯಲ್ಲಿ ಹಾಕಿಸಿಕೊಳ್ಳುವ ಪೂರಕ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ನಗರದ ಶಾಸಕರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಲೂ ಕೋವಿಡ್ ಲಸಿಕೆ ಬಗ್ಗೆ ಜನರಲ್ಲಿ ಭಯ ಹೋಗಿಲ್ಲ. ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ.ಈ ಹಿಂಜರಿಕೆ ಹೋಗಲಾಡಿಸಲು ಸ್ವತಃ ಲಸಿಕೆಯನ್ನು ಹಾಕಿಸಿಕೊಂಡಿರುವೆ. ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದರು.
ಸರ್ಕಾರ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಕೈಗಾರಿಕೋದ್ಯಮಗಳಲ್ಲಿ ಮೀಸಲಿರುವ ಸೇವಾ ನಿಧಿ ಕ್ರೋಢಿಕರಿಸಿ ಅಗತ್ಯ ಸೌಲಭ್ಯಕ್ಕಾಗಿ ಬಳಸಿಕೊಳ್ಳಬೇಕಿದೆ. ಮಾಧ್ಯಮದಲ್ಲಿ ಗಮನಿಸಿದಂತೆ ಇಲ್ಲಿ ಉತ್ಪಾದಿಸಿದ ಲಸಿಕೆಯನ್ನು ಬೇರೆ ದೇಶಗಳಿಗೆ ರಪ್ತು ಮಾಡಿರುವುದು ಆಡಳಿತದ ನಿಷ್ಕಾಳಜಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ 1 ಕೋಟಿ ಕೋವ್ಯಾಕ್ಸಿನ್ ಲಸಿಕೆಯನ್ನು ಖರೀದಿಸಲು ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಮುಂದಾಗಿರುವುದು ಸ್ವಾಗತಾರ್ಹ ಎಂದರು.