ಕೊಪ್ಪಳ: ಲೋಕ ಸಮರದ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಣದಲ್ಲಿರುವ ಅಭ್ಯರ್ಥಿಗಳು ನಾನಾ ತರಹದ ನಂಬಿಕೆಗಳನ್ನಿಟ್ಟುಕೊಂಡು ಕ್ಷೇತ್ರದ ಮತದಾರರ ಬಳಿಗೆ ಬರುತ್ತಿದ್ದಾರೆ. ಇದಕ್ಕೆ ಬಿಜೆಪಿಯ ಹಾಲಿ ಸಂಸದ ಸಂಗಣ್ಣ ಕರಡಿ ಸಹ ಹೊರತಾಗಿಲ್ಲ.
ತಮ್ಮ ಮಗಳ ಮನೆಯಿಂದ ಚುನಾವಣಾ ಕೆಲಸ ಪ್ರಾರಂಭಿಸಿದರೆ ತಮಗೆ ಗೆಲುವು ನಿಶ್ಚಿತ ಎಂಬ ಬಲವಾದ ನಂಬಿಕೆ ಇಟ್ಟುಕೊಂಡಿರುವ ಬಿಜೆಪಿಯ ನಿಯೋಜಿತ ಅಭ್ಯರ್ಥಿ ಸಂಗಣ್ಣ ಕರಡಿ, ಮಗಳ ಮನೆಯಿಂದಲೇ ಚುನಾವಣಾ ಕಣಕ್ಕೆ ಇಳಿಯಲಿದ್ದಾರಂತೆ. ಕಾರಣ ಪ್ರಗತಿ ನಗರದಲ್ಲಿರುವ ಮಗಳ ಮನೆಯಾದ ಗೀತಾ-ಗಿರೀಶ ಕಣವಿ ಎಂಬುದು ಇವರಿಗೆ ಲಕ್ಕಿ ಹೋಂ ಆಗಿದೆಯಂತೆ!
ಅವರು ಈ ಮೊದಲು ಮಗಳ ಮನೆಯಿಂದಲೇ ಚುನಾವಣಾ ಕೆಲಸ ಪ್ರಾರಂಭಿಸಿದ್ದರಂತೆ. ಆ ಚುನಾವಣೆಗಳಲ್ಲಿ ಅವರಿಗೆ ಗೆಲುವು ಸಹ ಆಗಿದೆಯಂತೆ. ಹೀಗಾಗಿ, ಸಂಗಣ್ಣ ಕರಡಿ ಅವರು ಚುನಾವಣಾ ಕೆಲಸಗಳನ್ನು ಮೊದಲು ಅವರ ಮಗಳ ಮನೆಯಿಂದ ಪ್ರಾರಂಭಿಸಲಿದ್ದಾರೆಂತೆ.
ನಾನು ಮಗಳ ಮನೆಯಿಂದ ಕೆಲಸ ಪ್ರಾರಂಭಿಸಿದ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೇನೆ. ಅಲ್ಲದೆ ಕಾರ್ಯಕರ್ತರು ಬಂದು ಹೋಗಲು ಈ ಮನೆ ಅನುಕೂಲವಾಗುತ್ತದೆ ಎಂಬ ಉದ್ದೇಶವೂ ಇದೆ. ಹೀಗಾಗಿ, ನಾನು ಚುನಾವಣೆಯ ಕೆಲಸವನ್ನು ಮಗಳಾದ ಗೀತಾ-ಗಿರೀಶ ಕಣವಿ ಅವರ ಮನೆಯಿಂದಲೇ ಆರಂಭ ಮಾಡುತ್ತೇನೆ ಎನ್ನುತ್ತಾರೆ ಸಂಸದ ಸಂಗಣ್ಣ ಕರಡಿ.