ಕೊಪ್ಪಳ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿಕಾರರಿಗೆ ಸಮರ್ಪಕ ಕೆಲಸ ನೀಡುವಂತೆ ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮಗಳ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರು ಪ್ರತಿಭಟನೆ ನಡೆಸಿದರು.
ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ನಗರದ ತಾಲೂಕ ಪಂಚಾಯತ್ ಕಚೇರಿ ಆವರಣದ ಮುಂದೆ ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಬಹಳಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕೆಲಸವನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಈಗಾಗಲೇ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿರುವ ಕೂಲಿಕಾರರಿಗೆ ಸಮರ್ಪಕವಾಗಿ ಕೂಲಿ ಪಾವತಿ ಮಾಡುತ್ತಿಲ್ಲ. ಕೂಲಿ ಪಾವತಿ ಮಾಡಿದರೂ ಸಹ ಕೂಲಿ ಹಣದಲ್ಲಿ ಕಡಿತ ಮಾಡಿ ನೀಡುತ್ತಿದ್ದಾರೆ. ಇದು ಆಗಬಾರದು. ನಿಗದಿಯಂತೆ ಪೂರ್ಣ ಪ್ರಮಾಣದ ಕೂಲಿ ಹಣ ಪಾವತಿಸಬೇಕು. ಉದ್ಯೋಗ ಖಾತ್ರಿ ಕೂಲಿ ಕೆಲಸಗಾರರಿಗೆ ಹಣ ಪಾವತಿ ಪಟ್ಟಿಯನ್ನು ಒಂದು ವಾರದೊಳಗೆ ನೀಡಬೇಕು. ಕೂಲಿ ಕೆಲಸ ನೀಡದಿದ್ದಲ್ಲಿ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಕೋಳೂರು, ಅಳವಂಡಿ, ಗುಳದಳ್ಳಿ ಸೇರಿದಂತೆ ತಾಲೂಕಿನ ಇನ್ನಿತರ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿರುವ ಕೂಲಿಕಾರರಿಗೆ ತ್ವರಿತವಾಗಿ ಸಮರ್ಪಕ ರೀತಿಯಲ್ಲಿ ಕೆಲಸ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೊರೋನಾದಿಂದಾಗಿ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಖಾತ್ರಿ ಯೋಜನೆಯಲ್ಲಿ ಸಮರ್ಪಕವಾಗಿ ಕೂಲಿ ಕೆಲಸ ನೀಡದೆ ಸತಾಯಿಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಒತ್ತಾಯಿಸಿದರು.