ಗಂಗಾವತಿ (ಕೊಪ್ಪಳ): ರಾಜ್ಯದ ಶೇ.12ರಷ್ಟು ಭೂಮಿಯಲ್ಲಿ ಏನನ್ನೂ ಬೆಳೆಯಲಾಗುತ್ತಿಲ್ಲ. ಕೃಷಿ ಕಾಯ್ದೆಗೆ ತಿದ್ದುಪಡಿ ತಂದು ನಿರುಪಯುಕ್ತ ಭೂಮಿಯನ್ನು ವಾಣಿಜ್ಯಕ್ಕೆ ಬಳಸುವ ಉದ್ದೇಶದ ಮಸೂದೆಗೂ ವಿಪಕ್ಷಗಳು ಕಲ್ಲು ಹಾಕಿ ದಾರಿ ತಪ್ಪಿಸುತ್ತಿವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕದಾಡಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಪ್ಷಕಗಳು ರೈತರನ್ನು ದಾರಿ ತಪ್ಪಿಸಿ ಪ್ರತಿಭಟನೆಗೆ ಪ್ರೇರೇಪಿಸುತ್ತಿವೆ. ಎಪಿಎಂಸಿ ಖಾಸಗೀಕರಣದಿಂದ ರೈತರಿಗೆ ಲಾಭವಿದೆಯೇ ವಿನಃ ಹಾನಿಯಿಲ್ಲ. ಕೃಷಿ ಕ್ಷೇತ್ರ ಹಾಗೂ ವಲಯ ಉತ್ತೇಜನಕ್ಕೆ ಸಂಬಂಧಿಸಿದಂತೆ ತಜ್ಞ ಸ್ವಾಮಿನಾಥನ್ ನೇತೃತ್ವದಲ್ಲಿನ ವರದಿಯನ್ನು ಈ ಹಿಂದೆ ಕಾಂಗ್ರೆಸ್ ಸರ್ಕಾರ ಮೂಲೆಗೆ ಸೇರಿಸಿತ್ತು. ಈಗ ರೈತರ ಹೆಗಲ ಮೇಲೆ ಬಂದೂಕು ಇಟ್ಟಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದತ್ತ ಗುರಿ ಮಾಡಿದೆ. ಪ್ರಚೋದಿತ ಹೋರಾಟಕ್ಕೆ ಕೈನಾಯಕರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಶೇ.12ರಷ್ಟು ಭೂಮಿ ಕೃಷಿಗೆ ಯೋಗ್ಯವಾಗಲ್ಲ. ಇನ್ನು ದೇಶದಲ್ಲಿ ಇದರ ಪ್ರಮಾಣ ಎಷ್ಟಿರಬಹುದು ಊಹಿಸಿ..? ಇದೇ ಉದ್ದೇಶಕ್ಕೆ ಕೃಷಿ ಭೂಮಿ ಖರೀದಿಗೆ ಅಡ್ಡಿಯಾಗಿರುವ ಎಬಿಸಿ79 ಮತ್ತು 108ರ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಮುಂದಾಗಿದೆ. ರೈತ ಸಂಘದ ಸ್ಥಾಪಕ ನಂಜುಂಡಸ್ವಾಮಿ ಕೂಡ ಎಬಿಸಿ 79 ಮತ್ತು 108ರ ಕಾಯ್ದೆಯ ವಿರುದ್ಧ ಅಸಮಧಾನ ಹೊಂದಿದ್ದರು ಎಂದರು.
ಓದಿ: ಕೃಷಿ ಕಾನೂನುಗಳಿಗೆ ವಿರೋಧ: ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮುಂದುವರೆಸಿದ ಕಾಂಗ್ರೆಸ್ ಸಂಸದರು