ಗಂಗಾವತಿ (ಕೊಪ್ಪಳ) : ವಿಧಾನಸಭೆಯ ಕಲಾಪಗಳ ಹಿನ್ನೆಲೆ ಒಂದು ತಿಂಗಳು ಕ್ಷೇತ್ರದಿಂದ ದೂರವಿದ್ದ ಶಾಸಕ ಜಿ. ಜನಾರ್ದನ ರೆಡ್ಡಿ, ಬುಧವಾರ ಸಂಜೆ ಸುರಿಯುತ್ತಿದ್ದ ಜಡಿ ಮಳೆಯಲ್ಲಿಯೇ ಅಧಿಕಾರಿಗಳೊಂದಿಗೆ ಸಿಟಿ ರೌಂಡ್ ಹಾಕಿ ಸಮಸ್ಯೆಗಳನ್ನು ಆಲಿಸಿದ್ದಾರೆ. ಮತ್ತೊಂದೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಾಳೆ ಜುಲೈ 27 ರಂದು ಜಿಲ್ಲೆಯ ಶಾಲಾ - ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಎಂ ಸುಂದರೇಶ ಬಾಬು ಮುಂಜಾಗೃತ ಕ್ರಮವಾಗಿ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ನಗರದ ಇಂದಿರಾ ವೃತ್ತದಿಂದ ಪಾದಯಾತ್ರೆಯ ಮೂಲಕ ಆರಂಭವಾದ ಶಾಸಕರ ಸಿಟಿ ರೌಂಡ್, ದುರುಗಮ್ಮ ನಾಲಾದಿಂದ ಜುಲೈನಗರದ ವರೆಗೂ ಸಾಗಿತು. ಇಲ್ಲಿನ ಎರಡೂ ಬದಿ ರಸ್ತೆಗಳ ಮಧ್ಯೆ ಇರುವ ಆಳವಾದ ತಗ್ಗುಗುಂಡಿಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡುತ್ತಿರುವ ದೃಶ್ಯವನ್ನು ಗಮನಿಸಿದರು. ಈ ವೇಳೆ, ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ಅವರಿಗೆ ಸೂಚನೆ ನೀಡಿದರು. ತಕ್ಷಣಕ್ಕೆ ದುರಸ್ತಿ ಸಾಧ್ಯವಾಗದೇ ಹೋದರೆ ಸಂಚಾರಕ್ಕೆ ತೊಂದರೆಯಾಗದಂತೆ ರಸ್ತೆ ಮಾಡಿಸಲು ತಿಳಿಸಿದರು.
ಗಂಗವಾತಿ ನಗರದ ಬೈಪಾಸ್ ರಸ್ತೆ ಮತ್ತು ಗೌಳಿ ಮಹದೇವಪ್ಪ ರೋಡ್ ಅವ್ಯವಸ್ಥೆ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ತೆರಳಿ ರಸ್ತೆ ವೀಕ್ಷಣೆ ಮಾಡಿದರು. ಬೈಪಾಸ್ ರಸ್ತೆ, ಮಹಾದೇವಪ್ಪ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಮೊಣಕಾಲೆತ್ತರಕ್ಕೆ ರಸ್ತೆಯಲ್ಲಿ ತಗ್ಗು ಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣವೇ ರಸ್ತೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಜನಾರ್ದನ ರೆಡ್ಡಿ ಸೂಚನೆ ಕೊಟ್ಟರು.
ಪ್ರತಿ ಪಂಚಾಯಿತಿಗೆ ಒಂದು ಕೋಟಿ ಅನುದಾನ : ಗಂಗಾವತಿ ವಿಧಾನಸಭಾ ಕ್ಷೇತ್ರದ 11 ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರಿಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ನನ್ನ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಪ್ರತಿ ಗ್ರಾಮ ಪಂಚಾಯಿತಿಗೆ ತಲಾ 1 ಕೋಟಿ ರೂ. ಮೊತ್ತದ ಅನುದಾನ ತಂದು ಅಭಿವೃದ್ಧಿ ಮಾಡುತ್ತೇನೆ. ಕೆಆರ್ಪಿಪಿಗೆ ಜೀವ ಕೊಟ್ಟು ನನ್ನನ್ನು ಗೆಲ್ಲಿಸಿದ ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆ ರೂಪಿಸಲಾಗಿದೆ. ಕ್ಷೇತ್ರದ ಯಾವೊಬ್ಬ ಸಾಮಾನ್ಯ ಪ್ರಜೆಗೂ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಇದೇ ವೇಳೆ ಭರವಸೆ ನೀಡಿದರು.
ಜೀವನದಲ್ಲಿ ಜನರ ಸೇವೆ ಮಾಡುವ ಅವಕಾಶ ನಿರಂತರವಾಗಿ ಸಿಗದು. ಸಿಕ್ಕ ಅವಕಾಶದಲ್ಲಿ ಜನರಿಗೆ ಅಗತ್ಯ ಇರುವ ಕೆಲಸಗಳನ್ನು ಪ್ರಮಾಣಿಕವಾಗಿ ಮಾಡಬೇಕು. ನಿಮ್ಮ ಹೆಸರು ಉಳಿಯುವಂತೆ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಅಧಿಕಾರ, ಹಣ, ಆಸ್ತಿ - ಅಂತಸ್ತು ಯಾವುದೂ ಶಾಶ್ವತವಲ್ಲ. ಆದರೆ, ನಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ್ದ ಕೆಲಸಗಳು ಸದಾ ನಮ್ಮನ್ನು ಸ್ಮರಿಸುವಂತೆ ಮಾಡುತ್ತವೆ. ಇಂತಹವರ ಅಧಿಕಾರದ ಅವಧಿಯಲ್ಲಿ ಈ ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದು ಜನ ಮಾತನಾಡಿಕೊಳ್ಳಬೇಕು ಎಂದು ಜನಪ್ರತಿನಿಧಿಗಳಿಗೆ ಅಭಿವೃದ್ದಿ ಕಾರ್ಯಗಳನ್ನು ಮಾಡುವಂತೆ ಕಿವಿ ಮಾತು ಹೇಳಿದರು.
20 ಸಾವಿರ ಹೆಕ್ಟೇರ್ ಪ್ರದೇಶದ ಭತ್ತಕ್ಕೆ ಹಾನಿಯಾಗುವ ಸಂಭವ : ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತಗೌಡ ನೇತೃತ್ವದಲ್ಲಿ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್ ಪಟ್ಟದಕಲ್, ಮಳೆ ಮತ್ತು ಕೃಷಿ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು. ಕಾರಟಗಿ ಮತ್ತು ಗಂಗಾವತಿ ತಾಲೂಕಿನಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಸಹಜವಾಗಿ ಜೂನ್ ತಿಂಗಳಲ್ಲಿ ಮುಂಗಾರು ಆರಂಭವಾದರೆ ಜಲಾಶಯದಿಂದ ಜೂನ್ ಮೊದಲ ವಾರದಲ್ಲಿ ನೀರು ಬಿಡುಗಡೆ ಮಾಡಲಾಗುತಿತ್ತು. ರೈತರು ಈ ಹೊತ್ತಿಗಾಗಲೇ ಭತ್ತ ನಾಟಿ ಮಾಡಿ ಒಂದೆರಡು ಬಾರಿ ಗೊಬ್ಬರ ಹಾಕುತ್ತಿದ್ದರು.
ಆದರೆ, ಈ ಬಾರಿ ಮುಂಗಾರು ವಿಳಂಬವಾಗಿದೆ. ಅಲ್ಲದೇ ಜಲಾಶಯದಿಂದಲೂ ಎರಡು ತಿಂಗಳು ತಡವಾಗಿ ನೀರು ಹರಿಸುತ್ತಿರುವುದರಿಂದ ರೈತರು ತಡವಾಗಿ ಭತ್ತ ನಾಟಿ ಮಾಡಬೇಕಾದ ಸ್ಥಿತಿಯಲ್ಲಿದ್ದಾರೆ. ಈ ಕಾರಣಕ್ಕಾಗಿ ಸೆಪ್ಟೆಂಬರ್ನಿಂದ ನವೆಂಬರ್ ವರೆಗೆ ಹವಾಮಾನ ವೈಪರೀತ್ಯ, ವಾತಾವರಣದಲ್ಲಿ ತೇವಾಂಶದ ಕೊರತೆಯಿಂದ ಭತ್ತ ಸರಿಯಾಗಿ ಬೆಳವಣಿಗೆಯಾಗದೇ ತೆನೆಕಟ್ಟದೇ ಇಳುವರಿ ಕಡಿಮೆಯಾಗುವ ಅವಕಾಶ ಹೆಚ್ಚಿವೆ ಎಂದು ಸಂತೋಷ್ ಪಟ್ಟದಕಲ್ ತಿಳಿಸಿದರು. ಬಳಿಕ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತಗೌಡ, ಸರ್ಕಾರದ ಗೃಹಲಕ್ಷ್ಮಿ ಯೋಜನೆಯಿಂದ ಯಾರು ಹೊರಗಿರದಂತೆ ನಿಗಾವಹಿಸಬೇಕು. ಈ ಬಗ್ಗೆ ಸಂಬಂಧಿತ ಇಲಾಖೆಗಳು ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.
ಇದನ್ನೂ ಓದಿ : ಅಂಜನಾದ್ರಿ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಒಂದು ರೂಪಾಯಿಯನ್ನೂ ನೀಡಿಲ್ಲ: ಜನಾರ್ದನ ರೆಡ್ಡಿ ಆರೋಪ