ಕುಷ್ಟಗಿ (ಕೊಪ್ಪಳ): ಸಜ್ಜೆ, ಮೆಕ್ಕೆಜೋಳವನ್ನು ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸಬೇಕು, ರಾಜ್ಯ ಸರ್ಕಾರ ಅದಕ್ಕೆ ಹೆಚ್ಚುವರಿ ದರ ನೀಡಬೇಕು. ಈ ಬಗ್ಗೆ ಸಿ.ಎಂ.ಯಡಿಯೂರಪ್ಪಗೆ ಮನವಿ ಮಾಡುವುದಾಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.
ಕುಷ್ಟಗಿಯಲ್ಲಿ 94 ಸಿಸಿ ಅನ್ವಯ ತೆಗ್ಗಿನ ಓಣಿಯ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದ ಬಳಿಕ ಮಾತನಾಡಿದ ಅವರು, ಮೆಕ್ಕೆಜೋಳ ಹಾಗೂ ಸಜ್ಜೆ ಕನಿಷ್ಠ ಬೆಲೆಗೆ ಕುಸಿದರೂ, ಇಲ್ಲಿಯವರೆಗೂ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿಲ್ಲ. ನ.23 ರಂದು ಮಸ್ಕಿಯಲ್ಲಿ ರಾಯಚೂರು, ಕೊಪ್ಪಳ ಉಭಯ ಜಿಲ್ಲೆಗಳ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ ಎಂದರು.
ಇದನ್ನೂ ಓದಿ:ಪ್ರತಾಪಗೌಡ ಪಾಟೀಲರ ಆಸ್ತಿ ವಿವರವನ್ನು ಮತದಾರರಿಗೆ ತಲುಪಿಸುತ್ತೇವೆ: ಶಾಸಕ ಬಯ್ಯಾಪೂರ
ತುಮಕೂರಿನಲ್ಲಿ ಕೊಬ್ಬರಿಗೆ ಪ್ರತಿ ಕ್ವಿಂಟಾಲ್ಗೆ 10 ಸಾವಿರ ರೂ. ಮೊತ್ತದಲ್ಲಿ ಕೇಂದ್ರ ಸರ್ಕಾರ ಖರೀದಿಸುತ್ತಿದೆ. ಇದಕ್ಕೆ 1 ಸಾವಿರ ರೂ. ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ನೀಡಲಾಗ್ತಿದೆ. ಅದೇ ರೀತಿ ಭತ್ತ ಖರೀದಿಗೆ ಪ್ರತಿ ಕ್ವಿಂಟಾಲ್ಗೆ ಹೆಚ್ಚುವರಿ 500 ರೂ. ನೀಡುವಂತೆ ಸಿಎಂ ಅವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು. ಪತ್ರಿಕೆಗಳಲ್ಲಿ ಸಜ್ಜೆ ಪ್ರತಿ ಕ್ವಿಂಟಾಲ್ಗೆ 2,100 ರೂ. ಹಾಗೂ ಮೆಕ್ಕೆಜೋಳ 1,850 ರೂ.ಗೆ ಖರೀದಿಸುವುದಾಗಿ ಜಾಹೀರಾತು ಪ್ರಕಟಿಸಲಾಗಿದೆ. ಆದರೆ, ಮಾರುಕಟ್ಟೆ ವಾಸ್ತವ ದರ ಪ್ರತಿ ಕ್ವಿಂಟಾಲ್ಗೆ ಸಜ್ಜೆ 1,100 ರೂ. ಮೆಕ್ಕೆಜೋಳ 950 ರೂ. ಇದೆ. ತೀರ ಅಗತ್ಯವಿರದ ಉತ್ಪನ್ನ ಖರೀದಿಸಲು ಮುಂದಾಗುವ ಸರ್ಕಾರ, ಅಗತ್ಯ ಉತ್ಪನ್ನಗಳಿಗೆ ಬೆಂಬಲ ಬೆಲೆ ಹಾಗೂ ಹೆಚ್ಚುವರಿ ದರ ನೀಡುತ್ತಿಲ್ಲ ಎಂದರು.