ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದ ಹೊರವಲಯದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಸರ್ಕಲ್ಗೆ ಕಿಡಿಗೇಡಿಗಳು ಡಾಂಬರ್ ಹಚ್ಚಿದ್ದು, ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ದೋಟಿಹಾಳ ಹೊರವಲಯದ ಮುದೇನೂರು ರಸ್ತೆಯಲ್ಲಿರುವ ಟಿಪ್ಪು ಸುಲ್ತಾನ್ ನಾಮಫಲಕಕ್ಕೆ ಕಿಡಿಗೇಡಿಗಳು ಕಳೆದ ರಾತ್ರಿ ಡಾಂಬರ್ ಹಚ್ಚಿ ವಿಕೃತಿ ಮೆರೆದಿದ್ದಾರೆ. ಪ್ರಕರಣ ಇಂದು (ಶುಕ್ರವಾರ) ಬೆಳಗ್ಗೆ ಬೆಳಕಿಗೆ ಬಂದಿದ್ದು, ಮುಸ್ಲಿಂ ಸಮುದಾಯದ ಯುವಕರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸ್ಐ ತಿಮ್ಮಣ್ಣ ನಾಯಕ್ ಸ್ಥಳಕ್ಕೆ ದೌಡಾಯಿಸಿದ್ದು, ಡಾಂಬರ್ ಹಚ್ಚಿದ ನಾಮಫಲಕವನ್ನು ಯಥಾಸ್ಥಿತಿಗೆ ತರಲು ಕ್ರಮ ಜರುಗಿಸಿದರು.
ಏಕಾಏಕಿ ಬೆಳವಣಿಗೆಯಿಂದ ಗ್ರಾಮದಲ್ಲಿ ವಾತಾವರಣ ಬಿಗುವಿನಿಂದ ಕೂಡಿದೆ. ಅವಧೂತಮುನಿ ಸುಖಮುನಿ ಸ್ವಾಮೀಜಿ ಭಾವೈಕ್ಯತೆ ಕ್ಷೇತ್ರವಾಗಿರುವ ದೋಟಿಹಾಳದಲ್ಲಿ ಶಾಂತಿ ಕದಡುವ ದುರುದ್ದೇಶದ ಹಿನ್ನೆಲೆಯಲ್ಲಿ ಕಿಡಗೇಡಿಗಳು ಈ ಕೃತ್ಯವೆಸಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಕುರಿತು ಸಿಪಿಐ ನಿಂಗಪ್ಪ ರುದ್ರಪ್ಪಗೋಳ 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಮಾತನಾಡಿ, ಕಿಡಿಗೇಡಿಗಳು ಟಿಪ್ಪು ಸುಲ್ತಾನ್ ವೃತ್ತಕ್ಕೆ ಡಾಂಬರ್ ಹಚ್ಚಿರುವ ಘಟನೆ ತಿಳಿಯುತ್ತಿದ್ದ ಸ್ಥಳಕ್ಕೆ ಆಗಮಿಸಿ ಮೊಕ್ಕಾಂ ಹೂಡಿದ್ದೇವೆ. ಟಿಪ್ಪು ಸುಲ್ತಾನ್ ವೃತ್ತ ಸ್ವಚ್ಚಗೊಳಿಸಿ ಪುನಃ ಯಥಾಸ್ಥಿತಿಗೆ ಕ್ರಮ ಕೈಗೊಂಡಿದ್ದೇವೆ. ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಮಹ್ಮದ್ ರಫಿ ಅವರಿಂದ ದೂರು ಸ್ವೀಕರಿಸಲಾಗಿದ್ದು, ಘಟನೆಗೆ ಕಾರಣರಾದ ಕಿಡಿಗೇಡಿಗಳನ್ನು ಪತ್ತೆ ಹಚ್ಚಲಾಗುವುದು ಎಂದರು.
ಇದನ್ನೂ ಓದಿ: ಮಹಿಳೆ ಹೊಟ್ಟೆಯೊಳಗೆ ಹತ್ತಿ ಬಿಟ್ಟು ಹೊಲಿಗೆ ಹಾಕಿದ್ದ ವೈದ್ಯರು: ದೂರು ದಾಖಲು