ಕೊಪ್ಪಳ : ಈಗ ಚುನಾವಣೆ ಬರುತ್ತಿದೆ. ಹೀಗಾಗಿ, ವಿರೋಧ ಪಕ್ಷದವರು ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ಹಿಂದಿನಿಂದಲೂ ರಾಷ್ಟ್ರ ಪ್ರೇಮಕ್ಕಾಗಿ ಆರ್‌ಎಸ್‌ಎಸ್ ಸಂಘಟನೆ ಇದೆ. ಆಗ ಯಾಕೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡಲಿಲ್ಲ. ಚುನಾವಣೆಗಾಗಿ ವಿರೋಧ ಪಕ್ಷಗಳಿಗೆ ಬೇರೆ ವಿಷಯವಿಲ್ಲ. ಹೀಗಾಗಿ, ಆ ಸಂಘಟನೆ ಬಗ್ಗೆ ಮಾತನಾಡುತ್ತಾರೆ ಎಂದು ದೂರಿದರು.
ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾದವರು ಆರ್ಎಸ್ಎಸ್ನ ಅಧಿಕ ಜನರು ಇದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿರುವುದು ಯುಪಿಎಸ್ಸಿ ಸಂಸ್ಥೆಗೆ ಮಾಡಿದ ಅವಮಾನ. ಯುಪಿಎಸ್ಸಿಯಲ್ಲಿ ಈ ಹಿಂದೆಯೂ ಅಧಿಕಾರಿಗಳು ಆಯ್ಕೆಯಾಗಿದ್ದಾರೆ. ಆಗ ಯಾಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.
ಕಲ್ಲಿದ್ದಲು ಗಣಿ ಭಾಗದಲ್ಲಿ ಮಳೆಯಿಂದಾಗಿ ರಾಜ್ಯದಲ್ಲಿ ಕಲ್ಲಿದ್ದಿಲು ಕೊರತೆಯಾಗಿದೆ. ನಮ್ಮ ರಾಜ್ಯದವರೇ ಆಗಿರುವ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಅವರೊಂದಿಗೆ ಮಾತನಾಡಿದ್ದೇವೆ. ಈಗ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಸದ್ಯ ವಿದ್ಯುತ್ ಉತ್ಪಾದನೆಯ ಘಟಕಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಬರುವ ದಿನಗಳಲ್ಲಿ ಹೆಚ್ಚು ಕಲ್ಲಿದ್ದಲು ಬರಲಿದೆ ಎಂದು ಸಚಿವ ಹಾಲಪ್ಪ ಆಚಾರ್ ಭರವಸೆ ನೀಡಿದರು.