ಕುಷ್ಟಗಿ(ಕೊಪ್ಪಳ): ನಗರದ ಎಪಿಎಂಸಿ ಪ್ರಾಂಗಣದಲ್ಲಿ ವಿದ್ಯುತ್ ಕಂಬಗಳು ಹಾಗೂ ಟಿಸಿ ಸ್ಥಳಾಂತರಿಸದಿರುವುದರಿಂದ ಸಿಮೆಂಟ್ ಕಾಂಕ್ರೀಟ್ ರಸ್ತೆಯ ಸುಗಮ ಕಾಮಗಾರಿಗೆ ಅಡ್ಡಿಯಾಗಿದೆ. ಮಳೆಗಾಲದ ಈ ದಿನಗಳಲ್ಲಿ ರಸ್ತೆ ಕೆಸರು ಗದ್ದೆಯಾಗಿದ್ದು, ಕೃಷಿ ಉತ್ಪನ್ನ ಲಾರಿಗಳು, ಗೂಡ್ಸ್ ವಾಹನಗಳು ಸಿಲುಕಿಕೊಳ್ಳುತ್ತಿದ್ದು, ಜೆಸ್ಕಾಂ ವಿಳಂಬ ಧೋರಣೆಯಿಂದಾಗಿ ಅಭಿವೃದ್ಧಿ ಕೆಲಸಕ್ಕೆ ಹಿನ್ನಡೆಯಾಗಿದೆ.
ಎಪಿಎಂಸಿಯ ಎರಡನೇ ಮುಖ್ಯ ರಸ್ತೆ, ಸಿಮೆಂಟ್ ಕಾಂಕ್ರೀಟ್ ರಸ್ತೆ, ಚರಂಡಿ ಕೆಲಸ ಆರಂಭವಾಗಿದ್ದು, ಸದ್ಯ ಚರಂಡಿ ಕೆಲಸ ಅರೆ ಬರೆಯಾಗಿದೆ. ಸಿಮೆಂಟ್ ಕಾಂಕ್ರೀಟ್ ರಸ್ತೆ ಆರಂಭಿಸುವುದು ಬಾಕಿ ಇದ್ದು, ಗುತ್ತಿಗೆದಾರರಿಗೆ ರಸ್ತೆಯ ಬದಿಯಲ್ಲಿರುವ 5 ವಿದ್ಯುತ್ ಕಂಬ ಹಾಗೂ 1 ಟಿಸಿ ಸ್ಥಳಾಂತರ ಕಾಮಗಾರಿ ಸ್ಥಗಿತಕ್ಕೆ ನೆಪವಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ತರುವ ಹಾಗೂ ಸಾಗಿಸುವ ಲಾರಿಗಳು, ಗೂಡ್ಸ್ ವಾಹನಗಳ ಓಡಾಟದಲ್ಲಿ ರಸ್ತೆ ಅಕ್ಷರಶಃ ಕೆಸರು ಗದ್ದೆಯಾಗಿದ್ದು, ಪಾದಚಾರಿಗಳು ಸಂಚರಿಸದಷ್ಟು ಹದಗೆಟ್ಟಿವೆ. ಈ ರಸ್ತೆಯಲ್ಲಿ ವಾಹನಗಳು ಪದೇ ಪದೆ ಸಿಲುಕಿಕೊಳ್ಳುತ್ತಿದ್ದು, ಕೃಷಿ ಉತ್ಪನ್ನಗಳ ಲೋಡಿಂಗ್, ಅನ್ ಲೋಡಿಂಗ್ಗೂ ಸಮಸ್ಯೆಯಾಗುತ್ತಿದೆ. ರಸ್ತೆ ಅಭಿವೃದ್ಧಿಯ ಸಂದರ್ಭದಲ್ಲಿ ಇಷ್ಟೆಲ್ಲ ತೊಂದರೆಗಳನ್ನು ಎದುರಿಸುವಂತಾಗಿದೆ.
ಈ ಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ಎಪಿಎಂಸಿ ಕಾರ್ಯದರ್ಶಿ ನೀಲಪ್ಪ ಶೆಟ್ಟಿ , ವಿದ್ಯುತ್ ಕಂಬ ಸ್ಥಳಾಂತರಕ್ಕೆ ಜೆಸ್ಕಾಂ ಎಇಇ ಅವರಿಗೆ ಪತ್ರ ಬರೆದಿದ್ದರೂ ಸ್ಪಂದಿಸಿಲ್ಲ. ವಿದ್ಯುತ್ ಕಂಬಗಳ ಸ್ಥಳಾಂತರವಿಲ್ಲದೇ ಸಿಮೆಂಟ್ ಕಾಮಗಾರಿ ನಿರ್ವಹಿಸುವುದು ಅಸಾಧ್ಯ. ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಸಂಬಂಧಿಸಿದ ಎಸ್.ಓ ವಿಳಂಬ ಮಾಡುತ್ತಿದ್ದು, ಅಭಿವೃದ್ಧಿ ಕೆಲಸಕ್ಕೆ ಹಿನ್ನಡೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.