ಕುಷ್ಟಗಿ(ಕೊಪ್ಪಳ): ತಾಲೂಕಿನಲ್ಲಿ ಕೋವಿಡ್ ಪಾಸಿಟಿವ್ ರೋಗಿಗಳ ಚಿಕಿತ್ಸೆಗಾಗಿ ಸಮಾಜ ಕಲ್ಯಾಣ ಇಲಾಖೆಯ ಎಸ್ಸಿ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಕೋವಿಡ್ ಕೇರ್ ಸೆಂಟರ್ ಆಗಸ್ಟ್ 6 ರಿಂದ ಆರಂಭಿಸಲು ಯೋಜಿಸಲಾಗಿದೆ.
ಇಲ್ಲಿಯವರೆಗೂ ಈ ವಸತಿ ನಿಲಯ ಶಂಕಿತರ ಕ್ವಾರಂಟೈನ್ ಕೇಂದ್ರವಾಗಿತ್ತು. ಇನ್ನು ಮುಂದೆ ಸೋಂಕಿತರ ಚಿಕಿತ್ಸಾ ಕೇಂದ್ರವಾಗಲಿದೆ. ಈ ವಸತಿ ನಿಲಯದಲ್ಲಿ ಪ್ರತಿ ಕೊಠಡಿಗೆ ನಾಲ್ಕು ಬೆಡ್ನಂತೆ 100 ರೋಗಿಗಳ ಬೆಡ್ ವ್ಯವಸ್ಥಿತಗೊಳಿಸಲಾಗಿದೆ. ಈ ಕಟ್ಟಡದಲ್ಲಿ ಒಟ್ಟು 12 ಶೌಚಾಲಯಗಳಿದ್ದು, ಈ ಹಿನ್ನೆಲೆಯಲ್ಲಿ ಈ ವಸತಿ ನಿಲಯದ ಸ್ವಚ್ಛತೆಗೆ ಪುರಸಭೆ ಕ್ರಮ ಕೈಗೊಂಡಿದೆ.
ಆಗಸ್ಟ್ 6 ರಿಂದ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಜಿಲ್ಲಾಡಳಿತ ಆದೇಶಿಸಿದ ಹಿನ್ನೆಲೆಯಲ್ಲಿ ಶುದ್ಧ ಕುಡಿಯುವ ನೀರು, ಬಿಸಿ ನೀರು, ಬೆಳಕಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳನ್ನು ವ್ಯವಸ್ಥಿತಗೊಳಿಸಲಾಗಿದೆ. ಅಲ್ಲದೇ ಈ ವಸತಿ ನಿಲಯದ ಹಿಂದುಗಡೆ ಇರುವ ಎಸ್ಟಿ ವಸತಿ ನಿಲಯದಲ್ಲಿ 50 ಬೆಡ್ಗಳ ಕೋವಿಡ್ ಕೇರ್ ಸೆಂಟರ್ಗೆ ಸಿದ್ಧತಾ ಕಾರ್ಯಗಳು ನಡೆದಿದೆ. ವಸತಿ ನಿಲಯದ ಪೂರ್ವ ಸಿದ್ಧತೆಯನ್ನು ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ ಪರಿಶೀಲಿಸಿದರು.