ಗಂಗಾವತಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಲ್ಯಾಣ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜನರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ಲಭಿಸುತ್ತಿದೆ. ಜನರ ಸ್ಪಂದನೆಯೇ ನಮಗೆ ಮುಂದಿನ ವಿಧಾನಸಭಾ ಚುನಾವಣೆ ಬಗ್ಗೆ ಭರವಸೆ ನೀಡುತ್ತಿದೆ ಎಂದು ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ಹೇಳಿದರು.
ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಕೆಲವೇ ದಿನಗಳಲ್ಲಿ ನಾನಾ ಕ್ಷೇತ್ರದ ಒಟ್ಟು 40 ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದ್ದೇವೆ. ನಮ್ಮ ಉದ್ದೇಶ ಬೇರೆ ಪಕ್ಷಗಳನ್ನು ಸೋಲಿಸುವುದು ಅಲ್ಲ. ನಮ್ಮದೇನಿದ್ದರೂ ಗೆಲವಿನ ದಡದತ್ತ ಪಯಣಿಸುವುದೇ ಗುರಿಯಾಗಿದೆ. ಹೀಗಾಗಿ ರಾಜ್ಯದ 30ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಈಗಾಗಲೆ ಗೆಲ್ಲುವ ಅಭ್ಯರ್ಥಿಗಳಿಗಾಗಿ ಸಮೀಕ್ಷೆ ಮಾಡಿಸುತ್ತಿದ್ದೇವೆ. ಸಮೀಕ್ಷೆ ಫಲಿತಾಂಶ ನೋಡಿಕೊಂಡು ಬಳಿಕ ಟಿಕೆಟ್ ಯಾರಿಗೆ ಕೊಡುವುದು ಎಂಬುದರ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದೇವೆ ಎಂದರು.
ಕಲ್ಯಾಣ ಕರ್ನಾಟಕ ಮಾತ್ರವಲ್ಲ, ಬೆಂಗಳೂರಿನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲಿನ ದೊಡ್ಡ ಮನೆತನದ ಕುಟುಂಬಗಳಿಂದಲೂ ನಮ್ಮ ಪಕ್ಷಕ್ಕೆ ಸೇರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುವುದು. ಬೇರೆ ಪಕ್ಷಗಳ ಪ್ರಣಾಳಿಕೆಗೆ ಭಿನ್ನವಾಗಿ ಮತ್ತು ಮಾದರಿಯಾಗಿರುವಂತಹ ಪ್ರಣಾಳಿಕೆಯನ್ನು ತಯಾರಿಸುವಲ್ಲಿ ನಮ್ಮ ತಂಡ ಸಕ್ರಿಯವಾಗಿದೆ. ಶೀಘ್ರವೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು. ಎಲ್ಲ ವರ್ಗದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಣಾಳಿಕೆ ತಯಾರಿಸುತ್ತೇವೆ ಎಂದರು.
2023ರ ವಿಧಾನಸಭಾ ಚುನಾವಣೆಗೆ ನಾನು ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಣೆ ಮಾಡಿದ್ದೇನೆ. ನನ್ನ ಕ್ಷೇತ್ರದಲ್ಲಿದ್ದು ಪ್ರತಿ ಗ್ರಾಮ, ವಾರ್ಡ್ಗಳಿಗೆ ಭೇಟಿ ನೀಡಲಿದ್ದೇನೆ. ಅಲ್ಲಿನ ಸಮಸ್ಯೆಗಳನ್ನು ಅರಿಯುವ ಪ್ರಯತ್ನವನ್ನು ಮಾಡಲಿದ್ದೇನೆ. ಕೊಪ್ಪಳ ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠವಾಗಿ ಸಂಘಟನೆ ಮಾಡುವ ಉದ್ದೇಶಕ್ಕೆ ಮೊದಲ ಆದ್ಯತೆ ನೀಡಿದ್ದೇವೆ. ಹಾಗಾಗಿ ಕೊಪ್ಪಳ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಮೊದಲು ಆಯ್ಕೆ ಮಾಡಲಾಗುತ್ತಿದೆ. ಕೊಪ್ಪಳ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಮನೋಹರ ಗೌಡ ಹೇರೂರು, ಗಂಗಾವತಿ ಗ್ರಾಮೀಣ ಘಟಕಕ್ಕೆ ದುರುಗಪ್ಪ ಆಗೋಲಿ ಹಾಗೂ ಗಂಗಾವತಿ ನಗರ ಘಟಕಕ್ಕೆ ವೀರೇಶ ಬಲ್ಕುಂದಿ ಅವರನ್ನು ನಿಯೋಜಿಸಲಾಗಿದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಯಾವ ಪಕ್ಷದವರನ್ನೂ ನನ್ನ ಪಕ್ಷಕ್ಕೆ ಒತ್ತಾಯಪೂರ್ವಕವಾಗಿ ಆಹ್ವಾನಿಸುವ ಕೆಲಸವನ್ನು ನಾನು ಮಾಡುವುದಿಲ್ಲ. ನನ್ನ ಕಾರ್ಯವನ್ನು ಮೆಚ್ಚಿ, ಭವಿಷ್ಯದಲ್ಲಿ ಏನನ್ನೋ ಸಾಧಿಸುತ್ತೇನೆ ಎನ್ನುವ ನಂಬಿಕೆಯಿಂದ ಯಾರೇ ಬಂದರೂ ನನ್ನ ಪಕ್ಷಕ್ಕೆ ಪ್ರೀತಿಯಿಂದ ಸ್ವಾಗತಿಸುತ್ತೇನೆ ಎಂದು ರೆಡ್ಡಿ ಈ ಮೊದಲು ಪಕ್ಷ ಘೋಷಣೆ ಮಾಡಿದಾಗಲೇ ಹೇಳಿದ್ದರು. ಅದರಂತೆ ಬಿಜೆಪಿಯ ಕೆಲವು ಮುಖಂಡರು ಈಗಾಗಲೇ ಜನಾರ್ದನ ರೆಡ್ಡಿ ಅವರ ನೂತನ ಪಕ್ಷವನ್ನು ಸೇರಿಕೊಂಡಿದ್ದಾರೆ.
ಮೊದಲ ಹಂತದಲ್ಲಿ ವಿಜಯನಗರ, ಕೊಪ್ಪಳ, ರಾಯಚೂರು, ಯಾದಗಿರಿ, ಬಿಜಾಪುರ, ಬಾಗಲಕೋಟೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಚಿತ್ರದುರ್ಗ, ತುಮಕೂರು, ಗುಲ್ಬರ್ಗ ಸೇರಿದಂತೆ ಇನ್ನಿತರ ಜಿಲ್ಲೆಗಳ ಗೆಲ್ಲುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದರು.
ಬೇರೆ ಪಕ್ಷಗಳ ಟಿಕೆಟ್ ಘೋಷಣೆಯಾದ ಬಳಿಕ ಅಲ್ಲಿನ ಅಸಮಾಧಾನಿತರು, ಅಥವಾ ಟಿಕೆಟ್ ಸಿಗದ ಅಕಾಂಕ್ಷಿಗಳನ್ನು ಸೇರಿಸಿಕೊಳ್ಳುವ ಉದ್ದೇಶ ನಮ್ಮ ಪಕ್ಷಕ್ಕಿಲ್ಲ. ನಮ್ಮದೇನಿದ್ದರೂ ಹೊಸ ಅಭ್ಯರ್ಥಿಗಳು, ಅದರಲ್ಲೂ ವರ್ಚಸ್ಸು ಇರುವ ಮತ್ತು ಯುವ ಉತ್ಸಾಹಿಗಳಿಗೆ ಮೊದಲ ಆದ್ಯತೆ ನೀಡಲಿದ್ದೇವೆ ಎಂದು ರೆಡ್ಡಿ ಹೇಳಿದರು.
ಇದನ್ನೂ ಓದಿ: ರೆಡ್ಡಿಯ ಕೆಆರ್ಪಿಪಿ ಪಕ್ಷಕ್ಕೆ ಜಿಲ್ಲಾಮಟ್ಟದ ಬಿಜೆಪಿ ಮುಖಂಡರು, ಕಾರ್ಯಕರ್ತರ ಸೇರ್ಪಡೆ