ಗಂಗಾವತಿ : ಪ್ರಯಾಣಿಕರಿಗೆ ಹೆಚ್ಚು ಅನುಕೂಲ ಕಲ್ಪಿಸುವ ಮತ್ತು ಪ್ರಮುಖ ನಗರ ಹಾಗೂ ಪಟ್ಟಣ ಪ್ರದೇಶಕ್ಕೆ ನೇರ ಸಂಪರ್ಕ ಕಲ್ಪಿಸುವ ಗಂಗಾವತಿ- ದರೋಜಿ ನೂತನ ರೈಲು ಮಾರ್ಗದ ಬೇಡಿಕೆಗೆ ಸಂಬಂಧಿಸಿದಂತೆ ಕೊಪ್ಪಳದ ಸಂಸದ ಕರಡಿ ಸಂಗಣ್ಣ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಸಂಸತ್ ಅಧಿವೇಷನದ ವೇಳೆ, ಮಾತನಾಡಲು ಸ್ಪೀಕರ್ ಓಂ ಬಿರ್ಲಾ ಸಂಸದರಿಗೆ ಅವಕಾಶ ಕಲ್ಪಿಸಿ ಕೊಟ್ಟರು. ಸಭೆಯಲ್ಲಿ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಬಳ್ಳಾರಿ ಜಿಲ್ಲೆಯ ದರೋಜಿ ಮಧ್ಯ ಬ್ರಾಡ್ಗೇಜ್ ರೈಲ್ವೆ ಮಾರ್ಗದ ಅಗತ್ಯವನ್ನು ಪ್ರತಿಪಾದಿಸಿದರು.
ಕೇವಲ 35 ಕಿ.ಮೀ. ಅಂತರವಿರುವ ಈ ಮಾರ್ಗದಲ್ಲಿ ನೂತನ ರೈಲು ಸಂಪರ್ಕಿಸಲು ಸಾಧ್ಯವಾದರೆ ಉತ್ಕೃಷ್ಟ ಗುಣಮಟ್ಟ ಸೋನಾ ಮಸೂರಿ ಬೆಳೆಯುವ ಗಂಗಾವತಿ ಭತ್ತಕ್ಕೆ ಮತ್ತಷ್ಟು ಮಾರುಕಟ್ಟೆ ತ್ವರಿತಗತಿಯಲ್ಲಿ ಸಿಗಲಿದೆ. ಸಾಕಷ್ಟು ಅಕ್ಕಿ ಗಿರಣಿಗಳಿದ್ದು, ರೈಲಿನ ಮೂಲಕ ಈ ಎಲ್ಲಾ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಸಂಸದರು ವಿವರಣೆ ನೀಡಿದ್ದಾರೆ.