ಕೋಲ್ಕತ್ತಾ (ಪಶ್ಚಿಮ ಬಂಗಾಳ) : ಆರ್ಜಿ ಕರ್ ಆಸ್ಪತ್ರೆ ಅತ್ಯಾಚಾರ - ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ಆದೇಶವು ಸಮಾಧಾನ ತಂದಿಲ್ಲ ಎಂದು ಸಂತ್ರಸ್ತೆಯ ಪೋಷಕರು ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಅರ್ಧ ಮನಸ್ಸಿನಿಂದ ಮಾಡಲಾಗಿದೆ. ಹಲವು ಆರೋಪಿಗಳು ಈ ಅಪರಾಧದಲ್ಲಿ ಭಾಗಿಯಾಗಿದ್ದು, ಅವರ ರಕ್ಷಣೆ ಮಾಡಲಾಗಿದೆ ಎಂದು ಆರೋಪಿಸಿರುವ ಅವರು, ನ್ಯಾಯಕ್ಕಾಗಿ ಉನ್ನತ ಕೋರ್ಟ್ಗೆ ಹೋಗಲಾಗುವುದು ಎಂದು ಪೋಷಕರು ತಿಳಿಸಿದ್ದಾರೆ.
ಇದು ಆಘಾತಕಾರಿಯಾಗಿದೆ. ಇದು ಅಪರೂಪದಲ್ಲಿ ಅಪರೂಪದ ಪ್ರಕರಣ ಹೇಗೆ ಅಲ್ಲ? ಕರ್ತವ್ಯದಲ್ಲಿದ್ದ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆಯಾಗಿದೆ. ಈ ಅಪರಾಧದ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಸಂತ್ರಸ್ತೆಯ ತಾಯಿ ದೂರಿದ್ದಾರೆ.
ಸಂತ್ರಸ್ತೆ ತಂದೆ ಮಾತನಾಡಿ, ಇತರೆ ಅಪರಾಧಿಗಳನ್ನು ಬುಕ್ ಮಾಡಿ, ಅವರಿಗೆ ಶಿಕ್ಷೆ ನೀಡುವವರೆಗೂ ಕಾನೂನು ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಸಿಎಂ ಮಮತಾ ಕೂಡ ಅಸಮಾಧಾನ : ಈ ಪ್ರಕರಣದ ಆದೇಶ ಕುರಿತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಪ್ರಕರಣವನ್ನು ಕೋಲ್ಕತ್ತಾ ಪೊಲೀಸರಿಂದ ಸಿಬಿಐ ಬಲವಂತವಾಗಿ ಹಸ್ತಾಂತರ ಮಾಡಿಕೊಂಡಿತು. ಅವರು ಮರಣದಂಡನೆಯ ಶಿಕ್ಷೆ ಭರವಸೆ ಕೊಡಿಸುವ ಭರವಸೆ ನೀಡಿದ್ದರು ಎಂದರು.
ನಾವೆಲ್ಲರೂ ಮರಣದಂಡನೆಗೆ ಬೇಡಿಕೆ ಇಟ್ಟಿದ್ದೆವು. ಅವರು ಹೇಗೆ ತನಿಖೆ ಮಾಡಿದರು ಎಂಬುದು ನಮಗೆ ಗೊತ್ತಿಲ್ಲ. ಈ ಆದೇಶ ಸಮಾಧಾನ ತಂದಿಲ್ಲ ಎಂದರು.
ಆರ್ಜಿ ಕರ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್ನನ್ನ ಸೆಲ್ಡಾ ನ್ಯಾಯಾಲಯ ಅಪರಾಧಿ ಎಂದು ಶನಿವಾರ ಆದೇಶ ಪ್ರಕಟಿಸಿತ್ತು. ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ. ಹಾಗೇ ಸಂತ್ರಸ್ತ ಕುಟುಂಬಕ್ಕೆ 17 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ತಿಳಿಸಿದೆ.
ಇದನ್ನೂ ಓದಿ: ಆರ್ಜಿ ಕರ್ ವೈದ್ಯೆ ಅತ್ಯಾಚಾರ, ಕೊಲೆ ಕೇಸ್ : ಅಪರಾಧಿ ಸಂಜಯ್ಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್