ಕೊಪ್ಪಳ: ಶುದ್ಧ ಕುಡಿಯುವ ನೀರು ಜನರಿಗೆ ಸಿಗಲೇಬೇಕಾದ ಮೂಲಭೂತ ಸೌಕರ್ಯಗಳಲ್ಲಿ ಒಂದು. ಹೀಗಾಗಿ ಆಡಳಿತ ವ್ಯವಸ್ಥೆ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡುತ್ತವೆ. ವಿವಿಧ ಯೋಜನೆಗಳ ಮೂಲಕ ನೀರು ಪೂರೈಸಲು ಹತ್ತಾರು ಕೋಟಿ ರೂಪಾಯಿ ವೆಚ್ಚದ ಯೋಜನೆಗಳನ್ನು ಜಾರಿಗೆ ತಂದರೂ ಕೂಡ ಅವು ಸರಿಯಾಗಿ ಅನುಷ್ಠಾನಗೊಳ್ಳದೆ ಹಲವೆಡೆ ನೀರಿನ ಬವಣೆ ಮುಂದುವರೆಯುತ್ತವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಕೊಪ್ಪಳ ಜಿಲ್ಲೆಯಲ್ಲಿ ಹಣ ಖರ್ಚಾಯಿತೇ ಹೊರತು ಉದ್ದೇಶಿತ ಗ್ರಾಮಗಳಿಗೆ ಸಂಪೂರ್ಣವಾಗಿ ನೀರು ಪೂರೈಸಲು ಇನ್ನೂ ಸಾಧ್ಯವಾಗಿಲ್ಲ.
ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ತುಂಗಭದ್ರಾ ನದಿ ಸೇರಿದಂತೆ ವಿವಿಧ ಜಿಲ್ಲೆಯ ವಿವಿಧ ನೀರಿನ ಮೂಲಗಳನ್ನು ಆಧರಿಸಿಕೊಂಡು ನೀರು ಪೂರೈಸುವ ಉದ್ದೇಶದೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿ ಸುಮಾರು ಸುಮಾರು 16 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಈ 16 ಯೋಜನೆಗಳ ಪೈಕಿ ಒಂದಿಷ್ಟು ಯೋಜನೆಗಳು ದಶಕಕ್ಕೂ ಹೆಚ್ಚು ಕಾಲ ಪೂರ್ಣಗೊಂಡರೂ ಸಹ ಉದ್ದೇಶಿತ ಹಳ್ಳಿಗಳಿಗೆ ಹನಿ ನೀರು ಸಹ ಪೂರೈಕೆಯಾಗಿಲ್ಲ. ಇನ್ನು ಕೆಲವೊಂದಿಷ್ಟು ಯೋಜನೆಗಳು ಅಧಿಕಾರಿಗಳ, ಗುತ್ತಿಗೆದಾರರ ಯಡವಟ್ಟಿನಿಂದ ಕುಂಟುತ್ತಾ, ತೆವಳುತ್ತಾ ಸಾಗಿವೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಮುಂಡರಗಿ ಮತ್ತು ಇತರೆ ಗ್ರಾಮಗಳ ಕುಡಿಯುವ ನೀರಿನ ಯೋಜನೆ, ಗಂಗಾವತಿ ಹಾಗೂ ಕನಕಗಿರಿ ತಾಲೂಕಿನ ಹೇರೂರು, ಹುಲಿಹೈದರ ಸೇರಿದಂತೆ ಇತರೆ ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಇನ್ನೂ ಅನೇಕ ಯೋಜನೆಗಳು ಆರಂಭದಲ್ಲಿಯೇ ಸಮರ್ಪಕವಾಗಿ ಅನುಷ್ಠಾನವಾಗದೆ ಈವರೆಗೂ ನೀರು ಪೂರೈಸಲು ಸಾಧ್ಯವಾಗಿಲ್ಲ. ಇದರ ಜೊತೆಗೆ ಈಗ ಜಿಲ್ಲೆಯಲ್ಲಿರುವ ಬಹುತೇಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸಂಪೂರ್ಣವಾಗಿ ಉದ್ದೇಶಿತ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ವಿಫಲ ಕಂಡಿವೆ.
ಹೀಗಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಹಣ ಖರ್ಚಾಯಿತೇ ಹೊರತು ಅಂದುಕೊಂಡಂತೆ ಜನರಿಗೆ ನೀರು ಸಿಗಲಿಲ್ಲ. ಕೆಲ ಯೋಜನೆಗಳ ಪೈಪ್‍ಗಳು, ಪಂಪ್‍ಹೌಸ್‍ಗಳು ಈಗಾಗಲೇ ಪಾಳುಬಿದ್ದಿವೆ. ಈಗಾಗಲೇ ಅನುಷ್ಠಾನಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ನೀರು ಬರದೆ ಇರುವುದನ್ನು ಸ್ವತಃ ಜಿಲ್ಲಾ ಪಂಚಾಯತ್ ಒಪ್ಪಿಕೊಳ್ಳುತ್ತಿದೆ.
ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲಿದ್ದ ಆರೋಪಿ ಎಸ್ಕೇಪ್: ಖದೀಮನಿಗೆ ಶೋಧ
ಅನುಷ್ಠಾನಗೊಂಡ ಯೋಜನೆಯ ವ್ಯಾಪ್ತಿಯಲ್ಲಿ ಸುಮಾರು 12 ಗ್ರಾಮಗಳಿದ್ದರೆ 10 ಗ್ರಾಮಗಳಿಗೆ ನೀರು ಹೋಗುತ್ತಿದ್ದು, ಇನ್ನೆರಡು ಗ್ರಾಮಗಳಿಗೆ ನೀರು ಹೋಗುತ್ತಿಲ್ಲ. ಹೀಗಾಗಿ ಈ ನೀರು ಹೋಗದ ಗ್ರಾಮಗಳಿಗೆ ಸಮಸ್ಯೆ ಸರಿಪಡಿಸಲು ಜಲಜೀವನ್ ಮಿಷನ್ ಯೋಜನೆಯಲ್ಲಿ ಅವಕಾಶ ಕಲ್ಪಿಸಲು ಸರ್ಕಾರದ ಅನುಮತಿ ಸಿಗಬೇಕಿದೆ.
ಇನ್ನು ಅನುಷ್ಠಾನಗೊಂಡಿರುವ ಕೆಲ ಯೋಜನೆಯಲ್ಲಿ ಒಂದಿಷ್ಟು ತೊಂದರೆಯಾಗಿದೆ. ತೊಂದರೆಯಾಗಿರುವ ಯೋಜನೆಯ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎನ್ನುತ್ತಾರೆ ಜಿಲ್ಲಾ ಪಂಚಾಯತ್ ಸಿಇಓ ರಘುನಂದನ್ ಮೂರ್ತಿ.