ಕೊಪ್ಪಳ: ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅಖಿಲಭಾರತ ಮಾದಿಗ ದಂಡೋರ ರಾಜ್ಯಾಧ್ಯಕ್ಷ ಬಿ. ಹುಸೇನಪ್ಪಸ್ವಾಮಿ ಮಾದಿಗ ಆಗ್ರಹಿಸಿದ್ದಾರೆ.
ಕೊಪ್ಪಳ ನಗರದ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಇನ್ನೂ ದಲಿತರ ಮೇಲೆ ದೌರ್ಜನ್ಯ, ಹಲ್ಲೆ, ಬಹಿಷ್ಕಾರ ಹಾಕುವಂತಹ ಘಟನೆಗಳು ನಡೆಯುತ್ತಲೇ ಇವೆ. ವಜ್ರಬಂಡಿ ಗ್ರಾಮದಲ್ಲಿ ಇತ್ತೀಚೆಗೆ ದಲಿತರ ಮೇಲೆ ಕೆಲವರು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಈಗಾಗಲೇ ದೂರು ದಾಖಲಿಸಿದ್ದರೂ ಅವರ ಮೇಲೆ ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ದಲಿತರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ದಾಖಲಿಸಬೇಕು ಹಾಗೂ ಅವರನ್ನು ಗಡಿಪಾರು ಮಾಡಬೇಕು ಎಂಬ ಆಗ್ರಹದೊಂದಿಗೆ ಆಗಸ್ಟ್ 9 ರಂದು ವಜ್ರಬಂಡಿ ಗ್ರಾಮದಿಂದ ಪಾದಯಾತ್ರೆ ಆರಂಭಿಸಲಾಗುತ್ತದೆ. ಆಗಸ್ಟ್ 11 ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಪಾದಯಾತ್ರೆ ನಡೆಸಲು ಪೊಲೀಸ್ ಇಲಾಖೆ ನಮಗೆ ಇನ್ನೂ ಅನುಮತಿ ನೀಡಿಲ್ಲ. ಹಲ್ಲೆ ಮಾಡಿದವರನ್ನು ತಕ್ಷಣ ಬಂಧಿಸಿದರೆ ಪಾದಯಾತ್ರೆ ಕೈಬಿಡುತ್ತೇವೆ. ಇಲ್ಲವಾದರೆ ಪರವಾನಿಗೆ ಸಿಗದಿದ್ದರೂ ಪಾದಯಾತ್ರೆ ನಡೆಸುತ್ತೇವೆ ಎಂದು ಬಿ. ಹುಸೇನಪ್ಪಸ್ವಾಮಿ ಮಾದಿಗ ಎಚ್ಚರಿಕೆ ರವಾನಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಕೆ. ಎಸ್. ಮೈಲಾರಪ್ಪ, ಯಲಬುರ್ಗಾ ತಾಲೂಕು ಘಟಕದ ಅಧ್ಯಕ್ಷ ಹುಲುಗಪ್ಪ ಹಿರೇಮನಿ ಬೇವೂರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.