ಕೊಪ್ಪಳ: ದಕ್ಷಿಣ ಭಾರತದ ಮಹಾಕುಂಭಮೇಳ ಎಂದು ಬಣ್ಣನೆಗೆ ಕೊಪ್ಪಳದ ಗವಿಮಠ ಜಾತ್ರೆ ಪಾತ್ರವಾಗಿದೆ. ಹೀಗಾಗಿ, ಕೊಪ್ಪಳದ ಗವಿಮಠ ಜಾತ್ರೆಯ ಸಂದರ್ಭದಲ್ಲಿ ಒಂದೊಂದು ಸಾಮಾಜಿಕ ಅರಿವಿನ ಕಾರ್ಯಕ್ರಗಳನ್ನು ರೂಪಿಸಿ ಅನುಷ್ಠಾನ ಮಾಡಲಾಗುತ್ತದೆ. ಅದರಂತೆ ಈ ವರ್ಷ ಜನವರಿಯಲ್ಲಿ ನಡೆದ ಜಾತ್ರೆಯ ಹಿನ್ನೆಲೆಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಮಹತ್ವದ ಉದ್ದೇಶದೊಂದಿಗೆ ಲಕ್ಷ ವೃಕ್ಷೋತ್ಸವ ಕಾರ್ಯಕ್ರಮ ಮಾಡಲಾಗಿತ್ತು. ಆದರೆ ಲಕ್ಷ ವೃಕ್ಷೋತ್ಸವಕ್ಕೆ ಕೋವಿಡ್ ತಡೆಗೋಡೆಯಾಗಿದೆ.
ಶ್ರೀಮಠದ ಹಿಂಭಾಗದಲ್ಲಿರುವ ಸಸ್ಯೋದ್ಯಾನದಲ್ಲಿ ವಿವಿಧ ಬಗೆಯ ಸಸಿಗಳನ್ನು ಬೆಳೆಸಲಾಗಿತ್ತು. ರೈತರಿಗೆ ಆದಾಯ ತರುವ ಸಸಿಗಳನ್ನು ಬೆಳೆಸಬೇಕು ಎಂಬ ಉದ್ದೇಶದಿಂದ ಮುಖ್ಯವಾಗಿ ನೇರಳೆ ಹಣ್ಣಿನ ಸಸಿಗಳನ್ನು ಹೆಚ್ಚಾಗಿ ಬೆಳೆಸಲಾಗಿದೆ. ಹೊಂಗೆ, ಬೇವು, ಅರಳೆ ಸೇರಿದಂತೆ ಅನೇಕ ಬಗೆಯ ಸಸಿಗಳನ್ನು ಬೆಳೆಸಿ ಅವುಗಳನ್ನು ಹಿರಹಳ್ಳದ ದಡದಲ್ಲಿ ನೆಡುವ ಹಾಗೂ ರೈತರಿಗೆ ವಿತರಿಸುವ ಉದ್ದೇಶ ಹೊಂದಲಾಗಿತ್ತು. ಇದೆಲ್ಲದಕ್ಕೂ ಕೋವಿಡ್ ಬ್ರೇಕ್ ನೀಡಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಬೆಳೆದಿರುವ ಎಲ್ಲ ಸಸಿಗಳು ಜೂನ್ 5 ರಂದು ಭೂಮಿಯಲ್ಲಿ ಬೇರೂರುತ್ತಿದ್ದವು. ಆದರೆ, ಕೊರೊನಾ ಭೀತಿಯಿಂದ ಸಸಿನೆಡುವ ಕಾರ್ಯ ನೆರವೇರಿಲ್ಲ. ಹೀಗಾಗಿ, ಲಕ್ಷ ವೃಕ್ಷೋತ್ಸವಕ್ಕಾಗಿ ಬೆಳೆದಿರುವ ಹತ್ತಾರು ಸಾವಿರ ವಿವಿಧ ಬಗೆಯ ಸಸಿಗಳು ಬೆಳೆದ ಜಾಗದಲ್ಲಿಯೇ ಉಳಿದುಕೊಂಡಿವೆ. ಸದ್ಯ ಬೆಳೆದು ನಿಂತಿರುವ ಸಸಿಗಳು ನಳನಳಿಸುತ್ತಿದ್ದು, ಯಾವಾಗ ತಮ್ಮ ಬೇರು ಭೂಮಿಯೊಳಗೆ ಬಿಡುವ ಕಾಲ ಬರುತ್ತದೆಯೋ ಎಂದು ಕಾಯುತ್ತಿವೆ.
ಈಗ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಮುಖ್ಯವಾಗಿದೆ. ಒಂದು ವೇಳೆ ಲಕ್ಷ ವೃಕ್ಷೋತ್ಸವ ಕಾರ್ಯಕ್ರಮ ನಡೆಸಿದರೆ ಜನರು ಸಾಕಷ್ಟು ಸಂಖ್ಯೆಯಲ್ಲಿ ಸೇರಿ ಸಾಮಾಜಿಕ ಅಂತರ ಮಾಯವಾಗುತ್ತದೆ ಎಂಬ ಕಾರಣಕ್ಕೆ ಬೆಳೆದಿರುವ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಗವಿಮಠ ಮುಂದೂಡುತ್ತಿದೆ. ಆದರೆ, ಈ ಲಕ್ಷ ವೃಕ್ಷೋತ್ಸವಕ್ಕೆ ಜಿಲ್ಲಾಡಳ ಹಾಗೂ ಜಿಲ್ಲಾ ಪಂಚಾಯ್ತಿ ಜೊತೆಗೂಡಿದ್ದು ಲಕ್ಷ ವೃಕ್ಷೋತ್ಸವ ಕಾರ್ಯಕ್ರಮ ಅನುಷ್ಠಾನಕ್ಕೆ ಚಿಂತನೆ ನಡೆಸಿವೆ.
ಮಳೆಗಾಲವಾಗಿರುವುದರಿಂದ ನೆಟ್ಟ ಸಸಿಗಳು ಬೇಗನೆ ಭೂಮಿಯಲ್ಲಿ ಬೇರೂರಲು, ಬೆಳೆಯಲು ಅನುಕೂಲವಾಗುತ್ತದೆ. ಇದು ಸಸಿಗಳನ್ನು ನೆಟ್ಟು ಬೆಳೆಸಲು ಸಕಾಲವಾಗಿದೆ. ಹೀಗಾಗಿ, ಈ ಲಕ್ಷ ವೃಕ್ಷೋತ್ಸವ ಶೀಘ್ರದಲ್ಲಿ ಮಾಡಲು ಗವಿಮಠವೂ ಚಿಂತನೆ ನಡೆಸಿದೆ. ಇದಕ್ಕೆ ಬೇಕಾದ ಅನುಕೂಲ, ಸಹಕಾರ ನೀಡಲು ಜಿಲ್ಲಾಡಳಿತ ಸಿದ್ಧವಾಗಿದೆ. ಆದಷ್ಟು ಬೇಗ ಕೋವಿಡ್ ವೈರಸ್ ತೊಲಗಿ ಲಕ್ಷ ವೃಕ್ಷೋತ್ಸವ ಕಾರ್ಯಕ್ರಮ ನಡೆಯಲಿ ಎಂಬುದು ಎಲ್ಲರ ಆಶಯವಾಗಿದೆ.