ಕುಷ್ಟಗಿ (ಕೊಪ್ಪಳ): ಮಳೆ ನೀರು ಇಂಗುವಂತೆ ಮಾಡಲು ಹಾಗೂ ಮಣ್ಣಿನ ಸವಕಳಿ ತಡೆಗೆ ರೈತರ ಜಮೀನುಗಳಲ್ಲಿ ಕೃಷಿ ಬದು ನಿರ್ಮಾಣದಲ್ಲಿ ರಾಜ್ಯದ 25 ಟಾಪರ್ಗಳಲ್ಲಿ ಕುಷ್ಟಗಿ ತಾಲೂಕು ಅಗ್ರ ಸ್ಥಾನದಲ್ಲಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ಸಾಧನೆ ಮಾಡಿರುವುದು ಗಮನಾರ್ಹವಾಗಿದೆ.
ಜೂನ್ 12ರವರೆಗೆ ನಡೆದ ಬದು ನಿರ್ಮಾಣ ಕಾರ್ಯದಲ್ಲಿ ತಾಲೂಕಿನ 36 ಗ್ರಾಮ ಪಂಚಾಯತ್ಗಳಿಗೆ ತಲಾ 720 ಬದುಗಳ ನಿರ್ಮಾಣದ ಗುರಿ ನೀಡಲಾಗಿತ್ತು. ಆದರೆ ಕುಷ್ಟಗಿ ತಾಲೂಕಿನಲ್ಲಿ 2,193 ಬದುಗಳನ್ನು ನಿರ್ಮಿಸಿ ದಾಖಲಾರ್ಹ ಸಾಧನೆ ಮಾಡಲಾಗಿದೆ. ನಿಗದಿತ ಗುರಿಗಿಂತ ಮೂರು ಪಟ್ಟು ಬದುಗಳನ್ನು ನಿರ್ಮಿಸುವ ಮೂಲಕ ಶೇ. 304.58ರಷ್ಟು ಗುರಿ ಮೀರಿದ ಸಾಧನೆ ಇದಾಗಿದೆ.
ಇದೇ ವೇಳೆ 177 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ರಾಜ್ಯದ 25 ತಾಲೂಕುಗಳಲ್ಲಿ ಮೊದಲ ಸ್ಥಾನವನ್ನು ಕುಷ್ಟಗಿ ತಾಲೂಕು ಗಳಿಸಿದೆ. ಎರಡನೇ ಸ್ಥಾನವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು, ಮೂರನೇ ಸ್ಥಾನವನ್ನು ವಿಜಯಪುರದ ಚಡಚಣ, 4ನೇ ಸ್ಥಾನ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಡೆದಿವೆ. ಇದೇ ಟಾಪರ್ಗಳ ಪಟ್ಟಿಯಲ್ಲಿ ಕೊನೆಯ ಸ್ಥಾನ ಕೊಪ್ಪಳ ಜಿಲ್ಲೆಯ ಕುಕನೂರು ಪಡೆದಿದೆ. ಈ ಶ್ರೇಣೀಕೃತ ಪಟ್ಟಿಯಲ್ಲಿ ಮೊದಲ ಸ್ಥಾನ ಹಾಗೂ ಕೊನೆಯ ಸ್ಥಾನ ಕೊಪ್ಪಳ ಜಿಲ್ಲೆಗೆ ಬಂದಿದೆ.