ಗಂಗಾವತಿ: ಹೆಚ್ಡಿಕೆ ಅವರದ್ದು ಡಬಲ್ ಸ್ಟ್ಯಾಂಡರ್ಡ್ ಪಾಲಿಸಿ. ಹಾನಗಲ್ ಮತ್ತು ಸಿಂದಗಿಯಲ್ಲಿ ಬಿಜೆಪಿಗೆ ಉಪಯೋಗವಾಗಲಿ ಹಾಗೂ ಕಾಂಗ್ರೆಸ್ ಮತ ವಿಭಜನೆಯಾಗಲಿ ಎಂದು ಮುಸ್ಲಿಂ ಅಭ್ಯರ್ಥಿಯನ್ನು ಹಾಕ್ತಾರೆ. ಇನ್ನೊಂದೆಡೆ ಆರ್ಎಸ್ಎಸ್ ಅನ್ನು ಬೈಯುತ್ತಾರೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆರೋಪಿಸಿದರು.
ಈ ಕುರಿತು ಮಾತನಾಡಿದ ಅವರು, ಮುಸ್ಲಿಂ ಸಮುದಾಯಕ್ಕೆ ಕುಮಾರಸ್ವಾಮಿಯಿಂದ ನಯಾಪೈಸೆ ಲಾಭವಾಗಿಲ್ಲ. ಏನಾದರೂ ಅಲ್ಪಸ್ವಲ್ಪ ನಮ್ಮ ಸಮುದಾಯದ ನೆರವಿಗೆ ಬಂದಿದ್ದು ಅಂದ್ರೆ ಅದು ಕೇವಲ ದೇವೇಗೌಡರು ಮಾತ್ರ. ಇಂದಿಗೂ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯವನ್ನು ಲೀಡ್ ಮಾಡುತ್ತಿರುವ ಒಬ್ಬರೇ ನಾಯಕ ಅಂದ್ರೆ ಅದು ಕೇವಲ ಸಿದ್ದರಾಮಯ್ಯ ಎಂದರು.
ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಸಿದ್ದರಾಮಯ್ಯನವರ ಪರವಾಗಿದೆ. ದೇವೇಗೌಡರ ಒತ್ತಾಸೆಗೆ ಕುಮಾರಸ್ವಾಮಿ ನನಗೆ ಸಚಿವ ಸ್ಥಾನ ನೀಡಿದ್ದರು. ಇದಕ್ಕಾಗಿ ಎಂದಿಗೂ ಅವರಿಗೆ ಕೃತಜ್ಞರಾಗಿರುತ್ತೇನೆ. ಹೆಚ್ಡಿಕೆ ಅಧಿಕಾರವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹಣ ಕೇಳಿದ್ರೆ ಬಾಯಿಗೆ ಬಂದಂತೆ ಬೈಯುತ್ತಿದ್ದರು. ವೈಯಕ್ತಿಕವಾಗಿ ಬಹುತೇಕ ಮುಸ್ಲಿಮರು ಜೆಡಿಎಸ್ ಅನ್ನು ವಿರೋಧಿಸುತ್ತಿದ್ದರು. ಹೀಗಾಗಿ ನಾನು 2008ರ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು ಎಂದರು.