ಗಂಗಾವತಿ: ಅಕ್ರಮ ಮರಳು ಸಂಗ್ರಹಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆ ಸ್ವತಃ ಸಹಾಯಕ ಆಯುಕ್ತ ದಾಳಿ ಮಾಡಿ ಪ್ರಕರಣ ದಾಖಲಿಸುವಂತೆ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ ಬಳಿಕವೂ ಅಧಿಕಾರಿಗಳು ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಸ್ವತಃ ತಾನೇ (ಎಸಿ) ರೇಡ್ ಮಾಡಿದ ಬಳಿಕ ಮೂರು ದಿನಗಳಾದರೂ ದೂರು ದಾಖಲಾಗದ ಬಗ್ಗೆ ಗಮನ ಹರಿಸಿದ ಸಹಾಯಕ ಆಯುಕ್ತ ಮತ್ತೆ ಲಿಖಿತ ಪೂರ್ವಕವಾಗಿ ನೋಟಿಸ್ ನೀಡಿ ವಾರ್ನ್ ಮಾಡಿದ ಬಳಿಕ ದೂರು ದಾಖಲಿಸಿದ್ದಾರೆ ಎನ್ನಲಾಗ್ತಿದೆ.
ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ಮರಳು ಸಂಗ್ರಹಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆ, ಸ್ವತಃ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದರು. ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ಮರಳು ಅಕ್ರಮವಾಗಿ ಸಂಗ್ರಹಿಸಿದ್ದನ್ನು ಕಂಡುಕೊಂಡ ಎಸಿ, ತಕ್ಷಣ ಸಂಬಂಧಿತ ಆರೋಪಿಗಳ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಆದರೆ ಮೂರು ದಿನ ಕಳೆದರೂ ಕ್ರಮಕ್ಕೆ ಅಧಿಕಾರಿಗಳು ಮುಂದಾಗದಿರುವುದನ್ನು ಗಮನಿಸಿದ ನಾರಾಯಣ ಕನಕರೆಡ್ಡಿ, ಹಿರಿಯ ಭೂವಿಜ್ಞಾನಿ, ಕಾರಟಗಿಯ ತಹಶೀಲ್ದಾರ್ ಹಾಗೂ ಗಂಗಾವತಿ ಗ್ರಾಮೀಣ ಪೊಲೀಸರಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ತಪ್ಪಿದಲ್ಲಿ ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ಎಚ್ಚರಿಸಿದ ಬಳಿಕ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
ಓದಿ : ಮನೆ ಮಹಡಿಯಿಂದ ಮತದಾನ ಪ್ರಕ್ರಿಯೆ ವೀಕ್ಷಿಸಿದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್