ಕೊಪ್ಪಳ: ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಎಂಎಲ್ಎ ಆಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ದಢೇಸೂಗುರು ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಅಥವಾ ಜೆಡಿಎಸ್ಗೆ ಹೋಗುತ್ತೇನೆ ಎಂದು ಯಾರು ನಿಮಗೆ ಹೇಳಿದ್ದಾರೆ, ಅವರಿಗೆ ಹೋಗಿ ಕೇಳಿ. ನಾನು ಬಿಜೆಪಿ ತೊರೆದು ಹೋಗುತ್ತೇನೆ ಎಂದು ನಾನೇನಾದರೂ ಹೇಳಿಕೆ ನೀಡಿದ್ದೇನಾ? ಸುಮ್ಸುಮ್ಮನೆ ಯಾಕೆ ಹೀಗೆ ಹೇಳುತ್ತೀರಿ ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಮಾಡಿದರು. ಕ್ಷೇತ್ರದ ಜನರು ತಮಗೆ ಆಶೀರ್ವಾದ ಮಾಡಿದ್ದು, ಈಗ ಕೆಲಸ ಮಾಡುತ್ತಿದ್ದೇನೆ. ಒಂದು ವೇಳೆ ಹೋಗುವುದಾದರೆ ಹೇಳಿ ಹೋಗುತ್ತೇನೆ. ಬಿಜೆಪಿ ಶಾಸಕನಾಗಿದ್ದೇನೆ ಬಿಜೆಪಿಯಲ್ಲೇ ಇರುತ್ತೇನೆ ಎಂದರು.
ಅಲ್ಲದೇ, ಕ್ಷೇತ್ರದ ಅಭಿವೃದ್ಧಿ ಹಾಗೂ ಅನುದಾನ ತರುವ ನಿಟ್ಟಿನಲ್ಲಿ ಸಿಎಂ ಸೇರಿದಂತೆ ಅನೇಕರನ್ನು ಭೇಟಿಯಾಗೋದು ಸಹಜ. ಬಿಜೆಪಿ ತೊರೆಯುವುದಿಲ್ಲ ಎಂಬ ಸ್ಪಷ್ಟನೆ ನೀಡಲು ಶಾಸಕ ಬಸವರಾಜ್ ದಢೇಸೂಗುರು ತಡವರಿಸಿದರು.